ಬೆಳಗಾವಿ, ಅ. 2: ಕರ್ನಾಟಕದಲ್ಲಿ ಎಸ್ಐಆರ್ ವಿಚಾರದಲ್ಲಿ ಹಲವು ಗೊಂದಲಗಳು ಏರ್ಪಟ್ಟಿವೆ. ಬೇಕಂತಲೇ ಕೆಲವರ ಹೆಸರುಗಳನ್ನು ಡಿಲೀಟ್ ಮಾಡಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿವೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಫಾರಂ-7 ದುರ್ಬಳಕೆ ಆರೋಪಿಸಿ ಚುನಾವಣೆ ಕಚೇರಿ ಮುಂದೆಯೇ ಧರಣಿ ನಡೆಸಿದೆ. ಇದರ ಬೆನ್ನಲ್ಲೇ ಫಾರಂ-7 ಅರ್ಜಿಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬೆಳಗಾವಿಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುವಂತೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ದಾಖಲೆ ಬಿಡುಗಡೆ ಮಾಡಿದ್ದರು. ಇದೀಗ ಮುಸ್ಲಿಂ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದ ಎನ್ನುವ ಆರೋಪದ ಮೇಲೆ ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್ ದಾಖಲಾಗಿದೆ.





