ಮಾಣಿಲ: ಬಂಟ್ವಾಳ ತಾಲೂಕಿನ ಮುರುವ ಗ್ರಾಮದ ಶ್ರೀಧಾಮ ಮಾಣಿಲದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅತ್ಯಂತ ವೈಭವ ಮತ್ತು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಆ. 28ರಂದು ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ.


ಕಳೆದ 26 ವರ್ಷಗಳಿಂದ ನಿರಂತರವಾಗಿ ಶ್ರೀಧಾಮದಲ್ಲಿ ಆಚರಿಸಿಕೊಂಡು ಬರುತ್ತಿರುವ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಪೂರ್ವಭಾವಿಯಾಗಿ 48 ದಿನಗಳಲ್ಲಿ (ಒಂದು ಮಂಡಲ) ನಡೆಸಿಕೊಂಡು ಬರುವ ಸಾಮೂಹಿಕ ಲಕ್ಷ್ಮೀ ಪೂಜೆಯೂ ನಾಳೆ ಸಮಾಪನಗೊಳ್ಳಲಿದೆ.
ಬೆಳಿಗ್ಗೆ 5-30ರಿಂದ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾತ್ರಿ 8-00 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಬಳಿಕ ಕಟೀಲು, ಧರ್ಮಸ್ಥಳ ಮತ್ತು ಮಾಣಿಲ ಮೇಳದ ಆಯ್ದ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರ ನಿಮ್ಮ ‘ನ್ಯೂಸ್ 19 ಕನ್ನಡ’ ಚಾನೆಲ್ನಲ್ಲಿ ಪ್ರಸಾರಗೊಳ್ಳಲಿದೆ.
ಆ. 29ರಂದು ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವದ ಅತ್ಯಂತ ಸಡಗರದಿಂದ ನಡೆಯಲಿದ್ದು, ನೂರಾರು ಮಂದಿ ಭಜಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.



