ಮಂಗಳೂರು: ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ನಾಗದೋಷಕ್ಕೆ ಪರಿಹಾರ ನೀಡುವ ಅತ್ಯಂತ ಪವರ್ ಫುಲ್ ಕ್ಷೇತ್ರ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಹರಿದು ಬರ್ತಾರೆ. ಈ ಪ್ರಸಿದ್ದ ಪುಣ್ಯಕ್ಷೇತ್ರ ಇದೀಗ ಮತ್ತೊಮ್ಮೆ ಆದಾಯದಲ್ಲಿ ಇತಿಹಾಸ ನಿರ್ಮಿಸಿದೆ. ಮುಜರಾಯಿ ಇಲಾಖೆಯ ಆಧೀನದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷ ರೂಪಾಯಿ ಆದಾಯ ಗಳಿಸಿದೆ. ಕಳೆದ ವರ್ಷ 155 ಕೋಟಿ ರೂಪಾಯಿ ಆದಾಯ ಗಳಿಸಿದ್ದ ದೇವಳ ಈ ಬಾರಿ ಸುಮಾರು 12 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದಾಖಲಿಸಿದೆ. ಇದೇ ಮೊದಲ ಬಾರಿಗೆ 168 ಕೋಟಿಯ ಗಡಿಗೆ ಸಮೀಪಿಸಿದ ಕುಕ್ಕೆ ದೇವಸ್ಥಾನ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಎಂಬ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ದೇವಳದ ಪ್ರಮುಖ ಆದಾಯ ಮೂಲವೇ ಹರಕೆ ಸೇವೆಗಳು. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಂದಲೇ 64 ಕೋಟಿಗೂ ಅಧಿಕ ಆದಾಯ ಬಂದಿದೆ. ಕಾಣಿಕೆ ಹುಂಡಿಯಿಂದ 24 ಕೋಟಿ ರೂಪಾಯಿ, ಸಾಮಾನ್ಯ ಕಾಣಿಕೆಯಿಂದ 5 ಕೋಟಿ ರೂಪಾಯಿ, ಹೂಡಿಕೆ ಮೇಲಿನ ಬಡ್ಡಿಯಿಂದ ಸುಮಾರು 49 ಕೋಟಿ ಆದಾಯ ಬಂದಿದೆ. ಇದಷ್ಟೇ ಅಲ್ಲದೆ ಛತ್ರಗಳ ಬಾಡಿಗೆ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಕೃಷಿ ತೋಟದ ಉತ್ಪನ್ನ, ಅನ್ನಸಂತರ್ಪಣೆ ನಿಧಿ ಹೀಗೆ ಹಲವು ಮೂಲಗಳಿಂದ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಹರಿದು ಬಂದಿದೆ.





