ಮ೦ಗಳೂರು, ಡಿ. 8: 2025-28 ನೇ ಸಾಲಿನ ಕೆ.ಇ.ಬಿ ಇಂಜಿನಿಯರ್ಗಳ ಸಂಘಕ್ಕೆ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಇಂಜಿನಿಯರ್ ಬಸವಣ್ಣ ಸಿ. ಮತ್ತು ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು ಡಿ.6 ರಂದು ಮಂಗಳೂರಿಗೆ ಭೇಟಿ ನೀಡಿದರು.
ಕಾವೂರು ಕೆ.ಇ.ಬಿ.ಇ.ಎ ಗಾರ್ಡನ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಂಗಳೂರು ವಲಯ ಕ.ವಿ.ಮಂ ಇಂಜಿನಿಯರ್ಗಳ ಸಂಘದ ವತಿಯಿಂದ ನೂತನವಾಗಿ ಚುನಾಯಿತರಾದ ಅಧ್ಯಕ್ಷರು ಮತ್ತು ಕೇಂದ್ರ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಮಂಗಳೂರು ವಲಯ ಮುಖ್ಯ ಇಂಜಿನಿಯರ್ ರವಿಕಾಂತ್ ಆರ್ ಕಾಮತ್ ಅವರು ಸಭೆಯ ಅಧ್ಯಕ್ಷತೆ ವಹಿಸಿದರು. ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಆರ್, ತಾಂತ್ರಿಕ ನಿರ್ದೇಶಕರಾದ ಹರೀಶ್ ಕುಮಾರ್ ವಿ, ಮುಖ್ಯ ಆರ್ಥಿಕ ಅಧಿಕಾರಿ ಮುರಳಿಧರ್ ನಾಯಕ್, ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್.ಲೋಹಿತ್ ಅವರು ಉಪಸ್ಥಿತರಿದ್ದರು.
ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಮಂಜಪ್ಪ ಅವರು ಪ್ರಸ್ತಾವಿಕ ಭಾಷಣ ಮಾಡಿದರು, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರು ಸ್ವಾಗತಿಸಿದರು, ಮಂಜುಳ ಶೆಟ್ಟಿ ನಿರೂಪಿಸಿದರು. ಅಧೀಕ್ಷಕ ಇಂಜಿನಿಯರ್ ಚೈತನ್ಯ ಅವರು ವಂದಿಸಿದರು.






