ವಲಸಿಗರಿಗೆ ಕನ್ನಡ ಕಲಿಸುವ ಪ್ರಯತ್ನದೊಂದಿಗೆ ಕರ್ನಾಟಕದ ಎಲ್ಲಾ ಧರ್ಮದವರೂ ಕನ್ನಡ ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ / ಕರವೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಎಲ್ಲ ಧರ್ಮಗಳ ಧರ್ಮಗುರುಗಳನ್ನು ಭೇಟಿಮಾಡಿ, ಧರ್ಮಕೇಂದ್ರಗಳಲ್ಲಿ ಕನ್ನಡದ ಅನುಷ್ಠಾನದ ಕುರಿತು ಸಹಭಾಗಿತ್ವ ಕೋರುವ ಅಭಿಯಾನದ ಮುಂದುವರಿದ ಭಾಗವಾಗಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಅವರನ್ನು ಭೇಟಿ ಮಾಡಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಅವರು ಹೇಳಿದ್ದಾರೆ. ಈ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಗುರುಗಳು ಅತ್ಯಂತ ಆಪ್ಯಾಯತೆ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು.
ಕ್ರೈಸ್ತ ದೇವಾಲಯಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಹಲವು ವರ್ಷಗಳಿಂದ ಇರುವ ಬೇಡಿಕೆಗಳ ಕುರಿತು ಅವರೊಂದಿಗೆ ಚರ್ಚಿಸಿದೆ. ಕನ್ನಡ ನಾಡು ಎಲ್ಲ ಧರ್ಮಗಳನ್ನೂ ಒಳಗೆ ತಂದುಕೊಂಡು ಹೇಗೆ ಬೆಳೆದುಬಂದಿದೆ ಎಂಬುದನ್ನು ವಿವರಿಸಿದೆ. ಸಹಬಾಳ್ವೆ, ಸೋದರತ್ವ, ಸಹಕಾರ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮಹತ್ವದ ಕುರಿತು ಅವರೊಂದಿಗೆ ಮಾತನಾಡಿದೆ. ಕನ್ನಡ ಸಂಸ್ಕೃತಿಗೆ ಕ್ರೈಸ್ತ ಅನುಯಾಯಿಗಳ ಕೊಡುಗೆಯನ್ನು ಸ್ಮರಿಸಿದೆ. ವಿಶೇಷವಾಗಿ ಬಿ.ಎಲ್.ರೈಸ್, ಲಾರ್ಡ್ ಕಬ್ಬನ್, ರೆವೆರೆಂಡ್ ಫರ್ಡಿನ್ಯಾಂಡ್ ಕಿಟೆಲ್, ಕ್ರಾಫರ್ಡ್ ಇನ್ನಿತರರು ಕನ್ನಡ ನಾಡಿನ ಪರಂಪರೆಯ ಭಾಗವಾಗಿರುವುದು ಮತ್ತು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ ವ್ಯಕ್ತಿತ್ವಗಳಾಗಿ ಉಳಿದುಕೊಂಡಿರುವುದನ್ನು ವಿವರಿಸಿದೆ ಎಂದು ಅವರು ಹೇಳಿದ್ದಾರೆ. ಮುಂದುವರಿದು ಕರ್ನಾಟಕದ ಕ್ರೈಸ್ತ ದೇವಾಲಯಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗಳು, ಪ್ರವಚನಗಳು ನಡೆಯಬೇಕಾದ ಮಹತ್ವವನ್ನು ನಾನು ಒತ್ತಿಹೇಳಿದೆ. ಕನ್ನಡದಲ್ಲಿ ಪ್ರಾರ್ಥನೆ ಎಂಬುದು ಕೇವಲ ಕನ್ನಡಿಗರ ಅಪೇಕ್ಷೆ ಅಥವಾ ಅನುಕೂಲಕ್ಕೆ ಮಾತ್ರವಲ್ಲ, ಅದರ ಮೂಲಕ ಕನ್ನಡೇತರರನ್ನು ಕನ್ನಡದ ಮುಖ್ಯವಾಹಿನಿಗೆ ತರುವ ಕಾರ್ಯವೂ ನಡೆಯುತ್ತದೆ. ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ವಾಸ ಮಾಡುತ್ತಿರುವವರನ್ನೂ ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ತಮ್ಮ ತಾಯ್ನುಡಿಯ ಜೊತೆಗೆ ಈ ನೆಲದ ನುಡಿಯನ್ನೂ ಅವರು ತಮ್ಮದಾಗಿಸಿಕೊಂಡರೆ ಅದರ ಲಾಭ ಅವರಿಗೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪ್ರಾರ್ಥನೆಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ ಎಂದಿದ್ದಾರೆ.









