ಪೊಲೀಸರ ಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ಗೋಸಾಗಾಟ ಮಾಡಲು ದಂಧೆಕೋರರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಹೊರಗಿನಿಂದ ನೋಡಿದರೆ ಮೊಟ್ಟೆ ಸಾಗಿಸುವ ವಾಹನದಂತೆ ಕಾಣುವ ಲಾರಿಯೊಳಗೆ, 16 ಜಾನುವಾರುಗಳನ್ನು ಅತ್ಯಂತ ಅಮಾನವೀಯವಾಗಿ ತುಂಬಿಸಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಮಂಗಳೂರಿನ ಪಂಪ್ವೆಲ್ ಬಳಿ ಕಾರ್ಯಾಚರಣೆ ನಡೆಸಿದ ಕಂಕನಾಡಿ ಪೊಲೀಸರು, ಈ ಜಾಲವನ್ನು ಭೇದಿಸಿ ಮೂಕಪ್ರಾಣಿಗಳನ್ನು ರಕ್ಷಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ…




ಮಂಗಳೂರು, ನ.17: ಮೊಟ್ಟೆ ಸಾಗಿಸುವ ವಾಹನದ ಮರೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಜಾನುವಾರುಗಳನ್ನು ಕಂಕನಾಡಿ ನಗರ ಪೊಲೀಸರು ಸೋಮವಾರ ಪತ್ತೆಹಚ್ಚಿ ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೈಸೂರು ಮೂಲದ ವಾಹನ ಚಾಲಕ ಮೊಹಮ್ಮದ್ ರಫೀಕ್ (52) ಮತ್ತು ರೆಹಮಾನ್ ಬಂಧಿತ ಆರೋಪಿಗಳು.

ಸಾಮಾನ್ಯವಾಗಿ ಮೊಟ್ಟೆಗಳನ್ನು ಸಾಗಿಸಲು ಬಳಸುವ ‘ಸ್ಟಾರ್ ಎಗ್’ (Star Egg) ಎಂಬ ಬರಹವುಳ್ಳ ಸರಕು ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕಂಕನಾಡಿ ಪೊಲೀಸರು, ರಾಷ್ಟ್ರೀಯ ಹೆದ್ದಾರಿ 66 ರ ಪಂಪ್ವೆಲ್ ಸಮೀಪದ ಉಜ್ಜೋಡಿ ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಮೊಟ್ಟೆ ಟ್ರೇಗಳ ಹಿಂದೆ ಅಮಾನವೀಯ ಸಾಗಾಟ:
ತಪಾಸಣೆಯ ವೇಳೆ, ಯಾರಿಗೂ ಅನುಮಾನ ಬಾರದಂತೆ ವಾಹನದ ಹಿಂಭಾಗದಲ್ಲಿ ಮೊಟ್ಟೆಯ ಟ್ರೇಗಳನ್ನು ಜೋಡಿಸಿಡಲಾಗಿತ್ತು. ಆದರೆ, ಅದರ ಒಳಭಾಗದಲ್ಲಿ 16 ಜಾನುವಾರುಗಳನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ ಈ ಜಾನುವಾರುಗಳನ್ನು ಖರೀದಿಸಿ, ಮಾಂಸದ ಉದ್ದೇಶಕ್ಕಾಗಿ ಕೇರಳದ ಕಾಸರಗೋಡಿಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಸದ್ಯ ಪೊಲೀಸರು ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ರಕ್ಷಿಸಲಾದ ಎಲ್ಲಾ 16 ಜಾನುವಾರುಗಳನ್ನು ಸುರಕ್ಷಿತವಾಗಿ ಫಜೀರ್ನಲ್ಲಿರುವ ಗೋಶಾಲೆಗೆ ಹಸ್ತಾಂತರಿಸಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
