ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜು, ನಿಟ್ಟಡೆ, ವೇಣೂರು ಇಲ್ಲಿ ದಿನಾಂಕ 15-11-2026ರಂದು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.




ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂಭಶ್ರೀ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಇಂದು ಉತ್ತಮ ಸ್ಥಾನಮಾನಗಳನ್ನು ಹೊಂದಿರುವುದು ಹೆಮ್ಮೆಯ ವಿಚಾರ. ಅವರೆಲ್ಲರನ್ನು ನಾನು ಪ್ರೀತಿಯಿಂದ ‘ಹಿರಿಯ ಮುತ್ತುಗಳು’ ಎಂದು ಕರೆಯಲು ಇಚ್ಛಿಸುತ್ತೇನೆ ಎಂದು ಅಭಿಮಾನದಿಂದ ನುಡಿದರು.

ಹೆಮ್ಮೆಯ ಸಂಗತಿ
ಸಂಸ್ಥೆಯ ಸಂಚಾಲಕರಾದ ಅಶ್ವಿತ್ ಕುಲಾಲ್ ಅವರೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ತಮ್ಮ ಶಾಲಾ ದಿನಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಗುರುವೊಬ್ಬರ ಶ್ರಮದಿಂದ ರೂಪುಗೊಂಡ ಸಂಸ್ಥೆಯೊಂದಕ್ಕೆ ಅದೇ ಕುಟುಂಬದ ಉತ್ತರಾಧಿಕಾರಿಯೊಬ್ಬರು ಸಾರಥ್ಯ ವಹಿಸುವುದು ಅಪರೂಪ. ಅಂದೊಮ್ಮೆ ಬಾಲಕನಾಗಿ ಆ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತ ಮಗುವೇ, ಇಂದು ಅದೇ ಶಾಲೆಯ ಭವಿಷ್ಯ ರೂಪಿಸುವ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡರೆ ಹೇಗಿರುತ್ತದೆ? ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪರಿಸರದಲ್ಲಿ ಇಂತಹದ್ದೊಂದು ಹೃದಯಸ್ಪರ್ಶ ಹಾಗೂ ಹೆಮ್ಮೆಯ ಸಂಗತಿ ನಡೆದಿದೆ. ಅಪ್ಪ ವಿದ್ಯಾರ್ಥಿಯಾಗಿ ಕತ್ತಲು-ಬೆಳಕಿನ ಪಾಠ ಕಲಿತ ಅದೇ ಸಂಸ್ಥೆಗೆ, ಇಂದು ಮಗನೇ ಹಳೆಯ ವಿದ್ಯಾರ್ಥಿಯ ಹೆಮ್ಮೆಯೊಂದಿಗೆ ಶಾಲೆಯ ಸಂಚಾಲಕರಾಗಿ ಮುನ್ನಡೆಸುತ್ತಿದ್ದು, ಸ್ಥಳೀಯವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಯಾವ ತರಗತಿ ಕೊಠಡಿಗಳಲ್ಲಿ, ಯಾವ ಶಿಕ್ಷಕರ ಮಾರ್ಗದರ್ಶನದಲ್ಲಿ ಅಪ್ಪ ಅಕ್ಷರ ಕಲಿಸಿದರೋ, ಅದೇ ಮಣ್ಣಿನಲ್ಲಿ, ಅದೇ ಕಟ್ಟಡದಲ್ಲಿ ಇಂದು ಮಗನು ಆಡಳಿತಾತ್ಮಕ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಶಿಕ್ಷಣ ಪ್ರೇಮ ಹಾಗೂ ಸಾಮಾಜಿಕ ಕಾಳಜಿ: ಕೇವಲ ವ್ಯವಹಾರಿಕವಾಗಿರದೆ, ಗ್ರಾಮೀಣ ಭಾಗದ ಶಿಕ್ಷಣದ ಅಭಿವೃದ್ಧಿಗೆ ಮತ್ತು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಈ ಯುವ ನಾಯಕತ್ವ ಹೊಸ ಚೈತನ್ಯ ತುಂಬಿದೆ.
ಸ್ಥಳೀಯರ ಮೆಚ್ಚುಗೆ: ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಮಗನು ಶಾಲೆಯ ಶ್ರೇಯೋದ್ಧಾರಕ್ಕಾಗಿ ಕೈಗೊಂಡಿರುವ ಈ ಹೆಜ್ಜೆಗೆ ಊರಿನ ಹಿರಿಯರು, ಪೋಷಕರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ ಅವರು ಮಾತನಾಡಿ, ಕುಂಭಶ್ರೀ ಸಂಸ್ಥೆಯಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಹೊಂದಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜಿನ ದಿನಗಳ ಸವಿನೆನಪುಗಳನ್ನು ಹಂಚಿಕೊಂಡು, ಹಳೆಯ ಸ್ನೇಹವನ್ನು ಮತ್ತೊಮ್ಮೆ ನೆನಪಿಸಿಕೊಂಡರು.
ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕರಾದ ಸುಮನ್ ಅವರು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಉಷಾ ಜಿ., ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮಮತಾ ಶಾಂತಿ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೋಭಾ ಎಲ್.ಎನ್ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿಯಾದ ಕುಮಾರಿ ಶರಣ್ಯ ಅವರು ನಿರೂಪಿಸಿದರು. ಮಾಂಟೆಸ್ಸರಿ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಅವರು ವಂದನಾರ್ಪಣೆ ಸಲ್ಲಿಸಿದರು.
