ಗ್ರಾಮೀಣ ಭಾಗದ ರೈತರ ಆರ್ಥಿಕ ಶಕ್ತಿಯಾಗಿ, ಜನಸಾಮಾನ್ಯರ ನಂಬಿಕೆಯ ಕೇಂದ್ರವಾಗಿ ಬೆಳೆದು ನಿಂತಿರುವ ಸಹಕಾರಿ ಸಂಸ್ಥೆಯೊಂದು ಏಳೂವರೆ ದಶಕಗಳ ಸಾರ್ಥಕ ಪಯಣ ಪೂರೈಸುತ್ತಿದೆ. ಹೌದು, ವೇಣೂರು ಪರಿಸರದ ಹೆಮ್ಮೆಯ ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಇದರೊಂದಿಗೆ ನೂತನ ‘ಸಂಗಮ’ ಸಭಾಭವನ, ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ 73ನೇ ದ.ಕ. ಜಿಲ್ಲಾ ಅಖಿಲ ಭಾರತ ಸಹಕಾರ ಸಪ್ತಾಹ-2026ರ ಬೃಹತ್ ಸಮಾವೇಶಕ್ಕೆ ಪೆರಾಡಿಯ ವಠಾರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ವೇಣೂರು: ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ, ನೂತನ ‘ಸಂಗಮ’ ಸಭಾಭವನದ ಲೋಕಾರ್ಪಣೆ, ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ ೭೩ನೇ ದ.ಕ. ಜಿಲ್ಲಾ ಅಖಿಲ ಭಾರತ ಸಹಕಾರ ಸಪ್ತಾಹ-2026 ಕಾರ್ಯಕ್ರಮವು ನ. 18ರಂದು ಪೆರಾಡಿ ಪ್ರಾ.ಕೃ.ಪ.ಸ. ಸಂಘದ ವಠಾರದಲ್ಲಿ ಅದ್ಧೂರಿಯಾಗಿ ನಡೆಯಲಿದೆ.




ಗಣ್ಯರ ಸಮಾಗಮ
ಈ ಐತಿಹಾಸಿಕ ಸಮಾರಂಭದಲ್ಲಿ ರಾಜ್ಯ ಸಹಕಾರ ಸಚಿವರಾದ ಲಕ್ಷ್ಮಣ ಸವದಿ, ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಹಾಗೂ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಸಹಕಾರಿ ಹಾಗೂ ರಾಜಕೀಯ ಕ್ಷೇತ್ರದ ಹಲವು ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ದಿನಪೂರ್ತಿ ನಿರಂತರ ಕಾರ್ಯಕ್ರಮಗಳು
ನ. 18ರಂದು ಬೆಳಿಗ್ಗೆ 9-30ರಿಂದ ಆರಂಭವಾಗಿ ರಾತ್ರಿ 10-00 ಗಂಟೆಯವರೆಗೆ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗಲಿವೆ.
ಈ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಸಹಕಾರಿಗಳು, ಸಂಘದ ಸದಸ್ಯರು, ರೈತ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
