ಬೆಂಗಳೂರು, ಜೂ. 5: ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿಯ ಅಲೆ ಎದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಕಾರಣ, ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಲಾಗಿದೆ.
ರಾಮಲಿಂಗಾ ರೆಡ್ಡಿಗೆ ಮಾತು ಕೊಟ್ಟಿದ್ದ ಡಿಕೆ ಶಿವಕುಮಾರ್!
ರಾಮಲಿಂಗಾ ರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. 2023 ರಲ್ಲಿ ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ, ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆ ನೀಡಿದ ಸಂದರ್ಭದಲ್ಲಿ, ‘ನಾನು ಮುಖ್ಯಮಂತ್ರಿಯಾದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ನನ್ನ ಬಳಿ ಇರುತ್ತದೆ, ಅದನ್ನೇ ನಿಮಗೆ ನೀಡುತ್ತೇನೆ’ ಎಂದು ಭರವಸೆ ನೀಡಿದ್ದರು. ಈ ಭರವಸೆಯನ್ನು ಉಳಿಸಿಕೊಳ್ಳುವಂತೆ ರಾಮಲಿಂಗಾ ರೆಡ್ಡಿ ಈಗ ಡಿಕೆ ಶಿವಕುಮಾರ್ ಬೆನ್ನುಬಿದ್ದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಯು ಕೃಷ್ಣ ಬೈರೇಗೌಡರ ಪಾಲಾಗಿದೆ. ಜಲಸಂಪನ್ಮೂಲ ಖಾತೆ ರಾಮಲಿಂಗಾ ರೆಡ್ಡಿ ಅವರಿಗೆ ಲಭಿಸಿದೆ. ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿಸಲು ಗುರುವಾರ ಡಿಕೆ ಶಿವಕುಮಾರ್ ಪ್ರಯತ್ನಿಸಿದ್ದರು. ಆದರೆ, ಹೈಕಮಾಂಡ್ ನಾಯಕರಾದ ಸುರ್ಜೆವಾಲಾ ಮತ್ತು ಕೆಸಿ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಿದ ನಂತರವೂ ಹೈಕಮಾಂಡ್ನಿಂದ ಅನುಮೋದನೆ ದೊರೆಯದ ಕಾರಣ, ಡಿಕೆ ಶಿವಕುಮಾರ್ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.





