ಬಡತನದ ಬೇಗೆಯಿಂದ ಕುಟುಂಬವನ್ನು ಮೇಲೆತ್ತಬೇಕು ಎಂಬ ಕನಸು ಹೊತ್ತಿದ್ದ ಆಕಾಂಕ್ಷಾ ಚತುರ್ವೇದಿ ಎಂಬ 18 ವರ್ಷದ ನೀಟ್ ಆಕಾಂಕ್ಷಿಯ ಬದುಕು ಇದೀಗ ತೀರಾ ದುರಂತ ಅಂತ್ಯ ಕಂಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ವರದಿಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಈ ವಿದ್ಯಾರ್ಥಿನಿ ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನಾಗ್ಪುರದ ಕೋಚಿಂಗ್ ಸೆಂಟರ್ವೊಂದರಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗಾಗಿ ತರಬೇತಿ ಪಡೆಯುತ್ತಿದ್ದ ಆಕಾಂಕ್ಷಾ, ಮೇ 20 ರಂದು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ದುರಂತ ನಡೆದು ಕೆಲ ದಿನಗಳ ಬಳಿಕ, ಆಕೆ ಬರೆದಿದ್ದ ಡೆತ್ ನೋಟ್ ಕುಟುಂಬಸ್ಥರಿಗೆ ಸಿಕ್ಕಿದ್ದು, ಆಕೆ ಎದುರಿಸುತ್ತಿದ್ದ ತೀವ್ರ ಮಾನಸಿಕ ವೇದನೆ ಮತ್ತು ಒತ್ತಡವನ್ನು ಸಾರ್ವಜನಿಕರ ಮುಂದಿಟ್ಟಿದೆ.
ಡೆತ್ ನೋಟ್ನಲ್ಲಿ ಆಕೆ ಬರೆದ ಸಾಲುಗಳು ಕಲ್ಲು ಹೃದಯವನ್ನೂ ಕರಗಿಸುವಂತಿವೆ. “ಅಪ್ಪ-ಅಮ್ಮ.. ನಿಮ್ಮ ಮಗಳು ಚೆನ್ನಾಗಿ ಓದಿ, ಕಷ್ಟಪಟ್ಟು ದೊಡ್ಡ ವೈದ್ಯೆಯಾಗುತ್ತಾಳೆ ಎಂಬ ಅಪಾರ ನಂಬಿಕೆ ನಿಮ್ಮಲ್ಲಿತ್ತು. ಆದರೆ, ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯ ನನಗಿಲ್ಲ. ನನ್ನ ಮೊದಲ ಪ್ರಯತ್ನದಲ್ಲಿಯೇ ನನಗೆ ಉತ್ತಮ ಅಂಕಗಳು ಬರುತ್ತಿದ್ದವು. ಆದರೆ ಈಗ, ನಾನು ಮತ್ತೆ ಅದೇ ರೀತಿ ಉತ್ತಮ ಸಾಧನೆ ಮಾಡುತ್ತೇನೆ ಎಂಬುದಕ್ಕೆ ಯಾವುದೇ ಖಾತರಿಯಿಲ್ಲ. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ, ನಾನು ಎಲ್ಲವನ್ನೂ ಹಾಳು ಮಾಡಿದೆ” ಎಂದು ಆಕೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಆಕಾಂಕ್ಷಾ, ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಮಗಾನಿಯಾ ಎಂಬ ಪುಟ್ಟ ಗ್ರಾಮದವಳು. ಆಕೆಯ ತಂದೆ ಕೃಷ್ಣ ಕುಮಾರ್ ಚೌಬೆ ಓರ್ವ ಸಣ್ಣ ರೈತ. ಕುಟುಂಬದ ಮೂಲಗಳ ಪ್ರಕಾರ, ಮಗಳ ವಿದ್ಯಾಭ್ಯಾಸಕ್ಕಾಗಿ ಅವರು ದೊಡ್ಡ ಆರ್ಥಿಕ ಹೊರೆ ಹೊತ್ತುಕೊಂಡಿದ್ದರು. ಹಳ್ಳಿಯಲ್ಲಿರುವ ಸಣ್ಣ ತುಂಡು ಭೂಮಿಯಲ್ಲಿ ಬೇಸಾಯ ಮಾಡುವುದರ ಜೊತೆಗೆ, ಮಗಳ ಕೋಚಿಂಗ್ ಶುಲ್ಕ ಮತ್ತು ಮನೆ ಖರ್ಚು ನಿಭಾಯಿಸಲು ಅವರು ನಾಗ್ಪುರದಲ್ಲಿ ಅಡುಗೆಯವರಾಗಿಯೂ ಕೆಲಸ ಮಾಡುತ್ತಿದ್ದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿದ್ದಲ್ಲದೆ, ಮಗಳ ನೀಟ್ ಸಿದ್ಧತೆಗಾಗಿ ಸಂಬಂಧಿಕರ ಬಳಿಯೂ ಅವರು ಆರ್ಥಿಕ ಸಹಾಯ ಪಡೆದಿದ್ದರು ಎಂದು ಆಕಾಂಕ್ಷಾಳ ಕುಟುಂಬ ಕಣ್ಣೀರು ಹಾಕುತ್ತದೆ.
ಬಡತನದಿಂದ ಕುಟುಂಬವನ್ನು ಮೇಲೆತ್ತಿ, ಬಿಳಿ ಕೋಟು ಧರಿಸಿ, ವೈದ್ಯೆಯಾಗಿ ಸೇವೆ ಸಲ್ಲಿಸಬೇಕೆಂಬ ಆಕೆಯ ಕನಸುಗಳು, ಅವಳು ಓದಿದ ಪುಸ್ತಕಗಳು ಆಕೆಯ ಪುಟ್ಟ ಕೋಣೆಯಲ್ಲಿ ಹಾಗೆಯೇ ಅನಾಥವಾಗಿ ಉಳಿದಿವೆ. ಆದರೆ ಆಕೆಯ ಪೋಷಕರ ಕೈಯಲ್ಲಿ ಈಗ ಉಳಿದಿರುವುದು ಮಗಳ ಭವಿಷ್ಯದ ಭರವಸೆಯಲ್ಲ, ಬದಲಿಗೆ ಅವಳು ಬರೆದಿಟ್ಟು ಹೋದ ಕಣ್ಣೀರಿನ ಕ್ಷಮೆಯಾಚನೆಯ ಕೊನೆಯ ಪತ್ರ ಮಾತ್ರ. ಇಡೀ ಶಿಕ್ಷಣ ವ್ಯವಸ್ಥೆ ಪ್ರಶ್ನಿಸುವಂತಹ ದುರಂತವಿದು.





