ಬೆಂಗಳೂರು: ಇತ್ತೀಚೆಗೆ ಶ್ರೀರಾಮ, ಲಕ್ಷ್ಮಣರ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ವಿರದ್ಧ ತಿರುಪತಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೆ ‘ಮಾರಿಕೊಂಡ ಪತ್ರಕರ್ತರಿಗೆ ವಿಶೇಷ ಆಹ್ವಾನ’ ಎಂದು ತಮ್ಮ ಸುದ್ದಿಗೋಷ್ಠಿಗೆ ಆಹ್ವಾನಿಸಿದ್ದ ಪ್ರಕಾಶ್ ರಾಜ್ ಮತ್ತು ಮಾಧ್ಯಮ ಮಿತ್ರರ ನಡುವೆ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬುಧವಾರ ಜಟಾಪಟಿ ನಡೆಯಿತು. ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆಯ ವಾತಾವರಣ ಉಂಟಾಗಿತ್ತು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಲು ಪ್ರಕಾಶ್ ರಾಜ್ ಇಂದು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಬೆಳಗ್ಗೆ 10.30 ಕ್ಕೆ ಸುದ್ದಿಗೋಷ್ಠಿಗೆ ಸಮಯ ನಿಗದಿ ಆಗಿತ್ತು. ಆದರೆ ಆಹ್ವಾನ ಪತ್ರದಲ್ಲಿ ‘ಮಾರಿಕೊಂಡ ಪತ್ರಕರ್ತರಿಗೆ ವಿಶೇಷ ಆಹ್ವಾನ’ ಎಂದು ಪ್ರಕಾಶ್ ರಾಜ್ ಬರೆಸಿ ಪತ್ರಕರ್ತರ ಕೆಂಗಣ್ಣಿಗೆ ಗುರಿಯಾದರು. ಸುದ್ದಿಗೋಷ್ಠಿಗೆ ಆರಂಭದಲ್ಲೇ ಇದನ್ನು ಆಕ್ಷೇಪಿಸಿದ ಪತ್ರಕರ್ತರು ಪ್ರಕಾಶ್ ರಾಜ್ಗೆ ಪ್ರಶ್ನೆಗಳ ಸುರಿಮಳೆ ಸುರಿಸಿದರು. ನಿಮ್ಮ ಪ್ರಕಾರ, ಮಾರಿಕೊಂಡ ಪತ್ರಕರ್ತರು ಯಾರು? ನಿಮ್ಮ ಪತ್ರಿಕಾಗೋಷ್ಠಿ ಆಹ್ವಾನದಲ್ಲಿ ಮಾರಿಕೊಂಡ ಪತ್ರಕರ್ತರಿಗೆ ವಿಶೇಷ ಆಹ್ವಾನ ಅಂತ ಬರೆದಿದ್ದೀರಿ..ಅವರು ಯಾರು ಅಂತ ಹೇಳಿ? ಎಂದು ಪಟ್ಟು ಹಿಡಿದರು.
ಬೆಳಗ್ಗೆ 10.30 ಕ್ಕೆ ಪತ್ರಿಕಾಗೋಷ್ಠಿ ಆರಂಭವಾದ ಬಳಿಕ ಸುಮಾರು ಹತ್ತು, ಹದಿನೈದು ನಿಮಿಷ ಇದೇ ವಿಚಾರವಾಗಿ ಜಟಾಪಟಿ ನಡೆಯಿತು. ಈ ಮೂಲಕ ಪ್ರಕಾಶ್ ರಾಜ್ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರು. ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಬೇರೆ ಪ್ರಶ್ನೆ ಕೇಳಿ ಎಂದು ಹೇಳಿದರು.
ಪತ್ರಕರ್ತರಿಗೆ ಪ್ರಕಾಶ್ ರಾಜ್ ಕೊಟ್ಟ ಉತ್ತರವೇನು?
‘ಮಾರಿಕೊಂಡ ಪತ್ರಕರ್ತರು ಆಹ್ವಾನ’ ಎನ್ನುವುದು ನನ್ನ ಲೇವಡಿ ಮಾತ್ರವಲ್ಲದೇ, ನನ್ನ ಆತಂಕವಾಗಿದೆ. ವರ್ಷಗಳಿಂದಲೂ ನಾನು ಅನೇಕ ಭಾಷೆಗಳ ಮಾಧ್ಯಮಗಳನ್ನು ನೋಡಿದ್ದಾರೆ. ಸದ್ಯ ಪರಿಸ್ಥಿತಿ ಬದಲಾಗಿದೆ. ನನಗೆ ಪತ್ರಿಕೋದ್ಯಮದಲ್ಲೂ ಸಾಕಷ್ಟು ಗೆಳೆಯರಿದ್ದಾರೆ. ಅವರು ಸತ್ಯವನ್ನು ಬರೆಯಲು ಆಗುತ್ತಿಲ್ಲ ಎಂದು ನನ್ನೊಂದಿಗೆ ತಮ್ಮ ನೋವು ಹಂಚಿಕೊಳ್ಳುತ್ತಾರೆ. ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಇದೆಲ್ಲ ನನಗೆ ಅರ್ಥವಾಗುತ್ತದೆ ಎಂದು ಸಮಜಾಯಿಷಿ ನೀಡಿದರು.
ಪ್ರೆಸ್ಕ್ಲಬ್ ಅಧಿಕೃತ ಆಹ್ವಾನದಲ್ಲಿ ಹೇಳಿಲ್ಲ
ಈ ರೀತಿಯ ಆಹ್ವಾನವನ್ನು ಪ್ರೆಸ್ಕ್ಲಾಬ್ನ ಅಧಿಕೃತ ಆಹ್ವಾನದಲ್ಲಿ ಹೇಳಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ವಿನಾಕಾರಣ ನನ್ನ ವಿರದ್ಧ ತೇಜೋವಧೆ ಮಾಡುವ ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ಇದನ್ನು ಹೇಳಿದ್ದೇನೆ ಹೊರತು ಬೇರೆ ಯಾವ ಉದ್ದೇಶದಿಂದ ಅಲ್ಲ ಎಂದರು. ಇನ್ನು ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ತಾನು ಗಿರೀಶ್ ಮಟ್ಟೆಣ್ಣನವರ ಹೇಳಿದಂತೆ ಕೇಳುವಂತೆ ಪ್ರಕಾಶ್ ರಾಜ್ಯ ತಿಳಿಸಿದ್ದಾರೆಂದು ಆರೋಪಿಸಿದ್ದಾರೆ. ಈ ವಿಚಾರ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಅಲ್ಲಿ ತೇಜೋವಧೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರಕಾಶ್ ರಾಜ್ ಸ್ಪಷ್ಟನೆ ಬಳಿಕ ಧರ್ಮಸ್ಥಳ ಆರೋಪ ಕುರಿತು ಮಾತನಾಡಿದರು. ಕೆಲವ ಹೊತ್ತಿನ ಬಳಿಕ ಗಲಾಟೆ ನಿಂತು ಎಂದಿನಂತೆ ಸುದ್ದಿಗೋಷ್ಠಿ ನಡೆಯಿತು. ಬಹುಭಾಷಾ ನಟ ಪತ್ರಕರ್ತರ ಕುರಿತು ನೀಡಿದ ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಖಂಡಿಸಿದ್ದಾರೆ.



