ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕೆಂಪು ಕೋಟೆ ಬಳಿ ಹುಂಡೈ i20 ಕಾರಿನಲ್ಲಿ ಸ್ಫೋಟ ಸಂಭವಿಸಿ ಎಂಟು ಜನರು ಸಾವನ್ನಪ್ಪಿದ್ದಾರೆ. ಸದ್ಯ ದೆಹಲಿ ಕಾರು ಸ್ಫೋಟ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಹಸ್ತಾಂತರಿಸಲಾಗಿದೆ. ಕಾರು ಸ್ಫೋಟದ ಸ್ಥಳದಲ್ಲಿ ಎನ್ಐಎ ಮತ್ತು ವಿಧಿವಿಜ್ಞಾನ ತಜ್ಞರ ತಂಡಗಳು ತನಿಖೆ ನಡೆಸುತ್ತಿವೆ.
ಸುಮ್ಮನೆ ಬಿಡೋದಿಲ್ಲ: ಮೋದಿ ಎಚ್ಚರಿಕೆ
ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಹಿಂದಿನ ಪಿತೂರಿಗಾರರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಸಂಸ್ಥೆಗಳು ಈ ಪಿತೂರಿಯನ್ನು ಭೇದಿಸುತ್ತವೆ. ಇದರ ಹಿಂದಿನ ಪಿತೂರಿಗಾರರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಅವರು ಭೂತಾನ್ನ ಥಿಂಪುವಿನಲ್ಲಿ ಹೇಳಿದ್ದಾರೆ.









