ಮಂಗಳೂರು: ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರೀತ್ಯಗಳ ಪ್ರಭಾಗ ತಗ್ಗಿದ ಬೆನ್ನಲ್ಲೆ ಈ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಮರೆಯಾಗಿ ಅಲ್ಲಲ್ಲಿ ಹಗುರ, ಸಾಧಾರಣ ಮಳೆ ಮಾತ್ರವೇ ದಾಖಲಾಗುತ್ತಿದೆ. ಮುಂದಿನ 5 ದಿನಗಳ ಕಾಲ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಮಳೆ ಕಡಿಮೆ ಆಗುತ್ತಿದ್ದಂತೆ ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದ ಮುನ್ಸೂಚನೆಯಂತೆ ಮುಂಗಾರು ಮಳೆ ದುರ್ಬಲಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಮರೆಯಾಗಿದ್ದು, ಬಿರು ಬೇಸಿಗೆಯ ವಾತಾವರಣ ಉಂಟಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಆಗಲಿದೆ. ಉಳಿದಂತೆ ಬಿಸಿಲಿನ ವಾತಾವರಣ ತಾತ್ಕಾಲಿಕವಾಗಿ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ರಾಜ್ಯದ ಯಾವೆಲ್ಲ ಭಾಗಗಳಲ್ಲಿ ಜೋರು, ಹಗುರ ಮಳೆ ನಿರೀಕ್ಷೆ ಇದೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕಕ್ಕೆ ಮಳೆ ಕೊರತೆ, ರೈತರಿಗೆ ತಪ್ಪದ ಆತಂಕ
ಪೆಸಿಫಿಕ್ ಮಹಾಸಾಗರದ ಮೇಲ್ಮೈನಲ್ಲಿ ತಾಪಮಾನದ ಹೆಚ್ಚಳ ವಾತಾವರಣ (ಎಲ್ನಿನೋ) ಪರಿಣಾಮವಾಗಿ ಈ ವರ್ಷ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆ ಬರಲಿದೆ ಎಂದು ಹೇಳಲಾಗಿದೆ. ಅದರ ಭಾಗವಾಗಿ ಜೂನ್ ಆರಂಭದಲ್ಲೇ ಮುಂಗಾರು ಮಳೆ ಕ್ಷೀಣಿಸಿದೆ. ಜೂನ್ 16ರಿಂದಲೇ ರಾಜ್ಯದಲ್ಲಿ ಮಳೆ ಮಾಯವಾಗಿದೆ. ಉತ್ತರ ಕರ್ನಾಟಕದಲ್ಲಿ ಕೆಲವು ದಿನಗಳಲ್ಲಿ ಅತ್ಯಧಿಕ ಬಿಸಿಲು ದಾಖಲಾಗುತ್ತಿದೆ. ಬಿಸಿಲು ಹೆಚ್ಚುತ್ತಿದ್ದು, ಭೂಮಿಯಲ್ಲಿ ತೇವಾಂಶ ಖಾಲಿಯಾಗುತ್ತಿದೆ. ಜಿಲ್ಲೆಯಲ್ಲಿ ಭತ್ತ ಬಿತ್ತನೆಗೆ ರೈತರು ಆಕಾಶ ನೋಡುವಂತಾಗಿದೆ.



