ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ಅಕ್ಟೋಬರ್ 28ರಂದು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತ ಮತ್ತು ಕರಾವಳಿಯಲ್ಲಿನ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ.



ಇದರ ಪರಿಣಾಮವಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ರಾಜ್ಯದ ಬರೋಬ್ಬರಿ 23 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿಯಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯ ಅಬ್ಬರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ನೇರ ಹೊಡೆತ ಕರ್ನಾಟಕದ ಮೇಲಾಗಿದೆ. ಇದರಿಂದಾಗಿ ದಕ್ಷಿಣ ಒಳನಾಡು, ಕರಾವಳಿ ತೀರ ಪ್ರದೇಶಗಳು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
