ಕೊಲ್ಕತ್ತಾ, ಡಿ.16: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರ ರಾಜೀನಾಮೆಯನ್ನು ಸಿಎಂ ಮಮತಾ ಬ್ಯಾನರ್ಜಿ ಅಂಗೀಕರಿಸಿದ್ದಾರೆ. ಲಿಯೋನೆಲ್ ಮೆಸ್ಸಿಯ GOAT ಇಂಡಿಯಾ ಪ್ರವಾಸದ ಸಂದರ್ಭದಲ್ಲಿ ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಗದ್ದಲ ಭುಗಿಲೆದ್ದ ನಂತರ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಲಿಯೋನೆಲ್ ಮೆಸ್ಸಿ ಅವರ GOAT ಟೂರ್ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಅವ್ಯವಸ್ಥೆಯ ಘಟನೆಗಳ ತನಿಖೆಗೆ ಸರ್ಕಾರ ಆದೇಶಿಸಿದ ನಂತರ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಇಂದು ರಾಜೀನಾಮೆ ನೀಡಿದ್ದಾರೆ. ಈ ಅವ್ಯವಸ್ಥೆಗೆ ಸಂಬಂಧಿಸಿದಂತೆ ಟೀಕೆಗಳನ್ನು ಎದುರಿಸುತ್ತಿರುವ ಸಚಿವ ಬಿಸ್ವಾಸ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬರೆದ ಪತ್ರದಲ್ಲಿ ಈ ಘಟನೆಯ ಬಗ್ಗೆ “ಮುಕ್ತ ಮತ್ತು ನ್ಯಾಯಯುತ ತನಿಖೆ”ಯನ್ನು ನಡೆಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಅವರ ರಾಜೀನಾಮೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಗೀಕರಿಸಿದ್ದಾರೆ.
ಮೆಸ್ಸಿಯನ್ನು ಕೊಲ್ಕತ್ತಾದಲ್ಲಿ ರಾಜಕಾರಣಿಗಳು ಮತ್ತು ವಿಐಪಿಗಳು ಸುತ್ತುವರೆದಿದ್ದರು. ಇದರಿಂದಾಗಿ ಒಂದು ಟಿಕೆಟ್ಗೆ 5-10 ಸಾವಿರ ರೂ. ಕೊಟ್ಟರೂ ಅಭಿಮಾನಿಗಳು ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಅಭಿಮಾನಿಗಳು ಕೋಪಗೊಂಡು ಆ ಸ್ಥಳದಲ್ಲಿ ಗಲಾಟೆಯೆಬ್ಬಿಸಿದರು. ಬಾಟಲಿ, ಕುರ್ಚಿಗಳನ್ನು ಕ್ರೀಡಾಂಗಣದತ್ತ ಎಸೆದರು. ಇದರಿಂದ ಮೆಸ್ಸಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೊಲ್ಕತ್ತಾವನ್ನು ಬಿಟ್ಟು ಹೊರಟರು.






