ಒಟ್ಟಾವೋ, ಜು. 27: ಕೆನಡಾದ ಟೊರೊಂಟೊದಲ್ಲಿ 26 ವರ್ಷದ ಭಾರತೀಯ ಮೂಲದ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ನವನೀತ್ ಕೌರ್ ಹತ್ಯೆಯಾದ ಯುವತಿ. ಹಂಬರ್ವುಡ್ ಬೌಲೆವಾರ್ಡ್ ಮತ್ತು ರೆಕ್ಸ್ಡೇಲ್ ಬೌಲೆವಾರ್ಡ್ ಬಳಿ ಗುಂಡಿನ ದಾಳಿಗೆ ಒಳಗಾಗಿ ಯುವತಿ ಮೃತಪಟ್ಟಿದ್ದಾಳೆ. ಕೌರ್ ಹತ್ಯೆಗೆ ಸಂಬಂಧಿಸಿದಂತೆ ಟೊರೊಂಟೊ ಪೊಲೀಸರು ಬ್ರಾಂಪ್ಟನ್ನ 37 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶರಣಜಿತ್ ಸಿಂಗ್ ಎಂದು ಗುರುತಿಸಲಾದ ಶಂಕಿತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸಿದ್ದ. ಈ ವೇಳೆ ಆತ ಯುವತಿಯನ್ನು ಮಾತನಾಡಿಸಿದ್ದಾನೆ. ಇಬ್ಬರ ನಡುವೆ ಒಂದಷ್ಟು ಹೊತ್ತು ಮಾತುಕತೆ ನಡೆಯಿತು. ಈ ವೇಳೆ ಯುವತಿಗೆ ಆರೋಪಿ ಶೂಟ್ ಮಾಡಿ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಾರಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಾಹಿತಿ ಇರುವ ಯಾರಾದರೂ ಪೊಲೀಸರನ್ನು ಅಥವಾ ಕ್ರೈಮ್ ಸ್ಟಾಪರ್ಸ್ ಅನ್ನು ಸಂಪರ್ಕಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ.



