ಮೈಸೂರು, ಜು. 27: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅಕ್ಟೋಬರ್ 11ಕ್ಕೆ ಉದ್ಘಾಟನೆ ಹಾಗೂ ಅಕ್ಟೋಬರ್ 21ಕ್ಕೆ ಜಂಬೂ ಸವಾರಿ ನಡೆಯಲಿದೆ. ಮಳೆ ಇಲ್ಲದೇ ಬರಗಾಲವಿದ್ದರೂ ಸಂಪ್ರದಾಯದಂತೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ದಸರಾ ಕುರಿತು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯವನರು ಕಾರ್ಯಕಾರಿ ಸಭೆ ನಡೆಸಿದ್ದು, ಕೆಲ ಮಹತ್ವ ತೀರ್ಮಾನಗಳನ್ನು ಕೈಗೊಂಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ 2026ರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 11ಕ್ಕೆ ಉದ್ಘಾಟನೆ ಹಾಗೂ ಅಕ್ಟೋಬರ್ 21ಕ್ಕೆ ಜಂಬೂ ಸವಾರಿ ನಡೆಯಲಿದೆ. ಹೀಗಾಗಿ ಈಗಿನಿಂದಲೆ ಸಕಲ ತಯಾರಿಗಳು ನಡೆದಿವೆ. ಈ ಸಂಬಂಧ ಸಚಿವ ಯತೀಂದ್ರ ಸಿದ್ದರಾಮಯ್ಯನವರು (ಜುಲೈ 27) ಮೈಸೂರಿನಲ್ಲಿ ದಸರಾ ಕಾರ್ಯಕಾರಿ ಸಭೆ ಮಾಡಿದ್ದು, ಈ ಬಾರಿ 17 ಉಪ ಸಮಿತಿಗಳನ್ನು ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಇನ್ನು ಈ ಸಭೆಯಲ್ಲಿ ಕಂಬಳ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಬದಲಿಗೆ ಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಬಿಡಲಾಗಿದೆ. ಇನ್ನು ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಇದ್ದು, ಇಬ್ಬರು ಮಾಜಿ ಕ್ರಿಕೆಟರ್ಸ್ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಹೆಸರು ಕೇಳಿಬಂದಿವೆ.
ದಸರಾ ಕಾರ್ಯಕಾರಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ದಸರಾ ಕುರಿತು ಕಾರ್ಯಕಾರಿ ಸಭೆ ನಡೆಸಿದ್ದು, ಉಪ ಸಮಿತಿಗಳ ರಚನೆ ಕುರಿತು ಸಲಹೆಗಳನ್ನು ಪಡೆದಿದ್ದೇವೆ 17 ಉಪ ಸಮಿತಿಗಳನ್ನು ಈ ಬಾರಿ ರಚನೆ ಮಾಡಲು ನಿರ್ಧಾರ ಮಾಡಿದ್ದೇವೆ. ಕಂಬಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಕಂಬಳ ಫೈನಲ್ ಆದರೆ ಇನ್ನೊಂದು ಉಪ ಸಮಿತಿ ಆಗತ್ತದೆ. ಕಂಬಳ ಮಾಡಿದರೆ ಸಾತಗಳ್ಳಿ ಅಲ್ಲೇ ಮಾಡುತ್ತಾರೆ. ಆದ್ರೆ ಸಿಎಂ ಇನ್ನೂ ಆ ಬಗ್ಗೆ ಫೈನಲ್ ಮಾಡಿಲ್ಲ. ಎಲ್ಲವೂ ಕೂಡ ಅವರ ಕೈನಲ್ಲಿ ಇದೆ ಎಂದು ಮಾಹಿತಿ ನೀಡಿದರು.



