ನವದೆಹಲಿ, ನ. 24: ಸಿದ್ದರಾಮಯ್ಯ -ಡಿಕೆ ಶಿವಕುಮಾರ್ ನಡುವೆ ಕುರ್ಚಿ ಕದನ ದಿನಕ್ಕೊಂದು ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್ ಅವರನ್ನ ಎರಡುವರೆ ವರ್ಷದ ಅವಧಿಗೆ ಸಿಎಂ ಮಾಡಬೇಕೆಂದು ಅವರ ಬೆಂಬಲಿಗರು ದೆಹಲಿ ಪರೇಡ್ ನಡೆಸಿದ್ದಾರೆ. ಈಗಾಗಲೇ ಡಿಕೆಶಿ ಬಣ ಎರಡು ತಂಡಗಳಾಗಿ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿವೆ. ಇನ್ನು ಡಿಕೆ ಶಿವಕುಮಾರ್ ಭೇಟಿಗೆ ರಾಹುಲ್ ಗಾಂಧಿ ಸಮಯ ಕೊಟ್ಟಿಲ್ಲ. ಹೀಗಾಗಿ ಡಿಕೆಶಿ ಖರ್ಗೆ ಅವರನ್ನ ಭೇಟಿ ಮಾಡಿಬಂದು ಇದೀಗ ತಮ್ಮದೇ ದಾಳ ಉರುಳಿಸುತ್ತಿದ್ದಾರೆ. ಇನ್ನೊಂದೆಡೆ ಡಿಕೆಶಿಯನ್ನೇ ಕಟ್ಟಿ ಹಾಕಲು ಸಿದ್ದರಾಮಯ್ಯ ಬಣ ಸೈಲೆಂಟ್ ದಾಳ ಉರುಳಿಸುತ್ತಿದೆ. ಹೀಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಉಲ್ಭಣವಾಗಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮಿಂದ ಏನು ಆಗುತ್ತಿಲ್ಲ ಎಂದು ಕೈಚೆಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗಳ ನಡುವೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ , ಸೈಲೆಂಟ್ ಆಗಿಯೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಡಿಕೆಶಿ ಭೇಟಿಗೆ ಸಮಯ ಕೊಡದ ರಾಹುಲ್, ಹರಿಪ್ರಸಾದ್ಗೆ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಸೈಲೆಂಟ್ ಆಗಿಯೇ ರಾಹುಲ್ ಭೇಟಿಯಾದ ಹರಿಪ್ರಸಾದ್
ಹೌದು…ಬೆಂಗಳೂರಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣ ಪ್ರತ್ಯೇಕವಾಗಿ ರಹಸ್ಯ ಸಭೆ ನಡೆಸುತ್ತಿವೆ. ಮಾಧ್ಯಮಗಳ ಮುಂದೆ ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಹ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಯತ್ನ ವಿಫಲವಾಗಿದ್ದು, ಅಸಮಾಧಾನದಿಂದಲೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದ್ರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಅತ್ಯಾಪ್ತರಾಗಿರುವ ಬಿಕೆ ಹರಿಪ್ರಸಾದ್ ಸೈಲೆಂಟ್ ಆಗಿಯೇ ಏಕಾಂಗಿಯಾಗಿ ದೆಹಲಿ ತೆರಳಿ ಇಂದು (ನವೆಂಬರ್ 24) ಮಧ್ಯಾಹ್ನ 12 ಗಂಟೆಗೆ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದು, ಕರ್ನಾಟಕ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶೀಘ್ರವೇ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.









