ಬೆಳ್ತಂಗಡಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಹೈನುಗಾರರ ಕಣ್ಣೀರು ಒರೆಸುವ ಮಹತ್ವದ ಪಾತ್ರವನ್ನು ನಿರ್ವಹಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಶ್ಲಾಘಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಪಶು ಆಹಾರದ ಬೆಲೆ ಹಾಗೂ ಪಶು ನಿರ್ವಹಣಾ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿವೆ. ಇದರಿಂದಾಗಿ ಇಡೀ ಹೈನುಗಾರಿಕಾ ಕ್ಷೇತ್ರವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರೈತರ ಮತ್ತು ಹೈನುಗಾರರ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಸರ್ಕಾರವು ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 7 ರೂಪಾಯಿಯನ್ನು ಘೋಷಣೆ ಮಾಡಿದೆ. ಈ ಹೆಜ್ಜೆಯು ರೈತಪರ ಸರ್ಕಾರದ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಲಾಗಿದೆ.
ರಾಜ್ಯದ ಹೈನುಗಾರರ ಹಿತ ಕಾಪಾಡಲು ಇಂತಹ ಐತಿಹಾಸಿಕ ಮತ್ತು ದಿಟ್ಟ ತೀರ್ಮಾನ ಕೈಗೊಂಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹೈನುಗಾರರ ಪರವಾಗಿ ರಕ್ಷಿತ್ ಶಿವರಾಂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



