ವೇಣೂರು: ಸರಕಾರ ಹಾಲಿನ ದರವನ್ನು ಪ್ರತಿ ಲೀಟರ್ಗೆ ಬರೋಬ್ಬರಿ 8 ರೂಪಾಯಿ ಏರಿಕೆ ಮಾಡುವ ಮೂಲಕ ದೀಪಾವಳಿ ಹಬ್ಬದ ಸನ್ನಿಹಿತದಲ್ಲೇ ಸಾಮಾನ್ಯ ಜನರಿಗೆ, ಶ್ರಮಿಕ ವರ್ಗಕ್ಕೆ ಬಹುದೊಡ್ಡ ಆರ್ಥಿಕ ಆಘಾತ ನೀಡಿದೆ. ಸರಕಾರದ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.


ಇದು ಕೇವಲ ಹಾಲಿನ ಬೆಲೆ ಏರಿಕೆಯಷ್ಟೇ ಅಲ್ಲ!
ಹಾಲಿನ ದರ ಹೆಚ್ಚಾಗಿರುವುದು ಬರಿ ದಿನನಿತ್ಯದ ಹಾಲಿನ ಬಜೆಟ್ಗೆ ಮಾತ್ರ ಸೀಮಿತವಾಗಿಲ್ಲ. ಇದರ ಸರಪಳಿ ಪರಿಣಾಮ (Chain Effect) ಹಾಲಿನ ಉತ್ಪನ್ನಗಳು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ತಯಾರಾಗುವ ಸಿಹಿತಿಂಡಿಗಳ (Sweets) ಮೇಲೆಯೂ ಗಂಭೀರವಾಗಿ ಬೀರಲಿದೆ.

ಹೋಟೆಲ್ ಚಹಾ ಬೆಲೆಯಲ್ಲಿ ಶೇ. 50ರಷ್ಟು ಹೆಚ್ಚಳದ ಭೀತಿ!
ಹಾಲಿನ ದರ ಏರಿಕೆಯ ನೇರ ಏಟು ಹೋಟೆಲ್ ಉದ್ಯಮದ ಮೇಲೆ ಬಿದ್ದಿದೆ. ಪರಿಣಾಮವಾಗಿ, ಹೋಟೆಲ್ಗಳಲ್ಲಿ ಚಹಾ/ಕಾಫಿ ದರ ಶೇಕಡಾ ೫೦ರಷ್ಟು ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.
ದಿನನಿತ್ಯ ಉದ್ಯೋಗ, ಕೂಲಿ ಅರಸಿ ಬರುವ ಕಾರ್ಮಿಕ ವರ್ಗ ಮತ್ತು ಸಾರ್ವಜನಿಕರು ಹೋಟೆಲ್ ಚಹಾ/ಕಾಫಿಗಾಗಿ ಹೆಚ್ಚಿನ ಹಣ ತೆರಬೇಕಾದ ಸನ್ನಿವೇಶ ಎದುರಾಗಿದೆ.
ಹಬ್ಬದ ಸಮಯದಲ್ಲಿ ಮಧ್ಯಮ ಹಾಗೂ ಬಡ ಕುಟುಂಬಗಳ ಮಾಸಿಕ ಬಜೆಟ್ ಪೂರ್ತಿ ಏರುಪೇರಾಗಲಿದೆ
ರೈತರಿಗೆ ಲಾಭವೇ? ಒಕ್ಕೂಟಗಳ ಲೆಕ್ಕಾಚಾರವೇನು?
ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ರೈತರಿಗೆ ಪ್ರತಿ ಲೀಟರ್ಗೆ ₹7 ಹೆಚ್ಚುವರಿ ಸಹಾಯಧನ ದೊರೆಯಲಿದೆ ಎಂಬುದು ಆಶಾದಾಯಕ ವಿಷಯವಾಗಿದ್ದರೂ, ಹಾಲು ಒಕ್ಕೂಟಗಳು ₹1 ಉಳಿಸಿಕೊಳ್ಳುವುದಾಗಿ ಹೇಳಿವೆ. ಆದರೆ, ಮುಂದಿನ ದಿನಗಳಲ್ಲಿ ಈ ಒಕ್ಕೂಟಗಳು ಹಾಲಿನ ಸಿಹಿತಿಂಡಿಗಳು ಹಾಗೂ ಇತರೆ ಉತ್ಪನ್ನಗಳ ಬೆಲೆಯನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಲಿವೆ ಎಂಬುದನ್ನು ಕಾದುನೋಡಬೇಕಿದೆ.
ಜನರ ಕಳಕಳಿ: “ಹೈನುಗಾರರಿಗೆ ಪ್ರೋತ್ಸಾಹ ನೀಡುವುದು ಸ್ವಾಗತಾರ್ಹ, ಆದರೆ ಹಬ್ಬಗಳ ಸಾಲು ಸಾಲು ರಜೆಗಳಿರುವಾಗಲೇ ಏಕಾಏಕಿ ₹8 ಏರಿಸಿ ಜನಸಾಮಾನ್ಯರ ಹೊಟ್ಟೆಗೆ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ? ಸರಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿ, ಜನಸಾಮಾನ್ಯರಿಗೆ ನಿರಾಳತೆ ನೀಡಬೇಕು.”
ಜನರ ಕಣ್ಣೀರಿನಲ್ಲಿ ಹಬ್ಬ ಆಚರಿಸಬೇಕೇ?: ಸರಕಾರಕ್ಕೆ ಸಾಲು ಸಾಲು ಪ್ರಶ್ನೆ!
”ರೈತರ ಹಿತರಕ್ಷಣೆ ನೆಪದಲ್ಲಿ ಸಾಮಾನ್ಯ ಜನರ ಜೇಬಿಗೆ ಕನ್ನ ಹಾಕುವುದು ಯಾವ ಸೀಮೆ ನ್ಯಾಯ? ದೀಪಾವಳಿಯಂತಹ ಸಾಲು ಸಾಲು ಹಬ್ಬಗಳ ನಡುವೆಯೇ ಜನಸಾಮಾನ್ಯರ ಹೊಟ್ಟೆಗೆ ಹೊಡೆಯುವ ಈ ತೀರ್ಮಾನ ಸರಕಾರದ ಜನವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ. ಒಂದೆಡೆ ಹಾಲಿನ ದರ ಏರಿಕೆ, ಇನ್ನೊಂದೆಡೆ ಚಹಾ-ಸಿಹಿತಿಂಡಿಗಳ ಬೆಲೆ ಭರಾಟೆ—ಇವೆಲ್ಲದರ ನಡುವೆ ಬಡವ ಮತ್ತು ಮಧ್ಯಮ ವರ್ಗದ ಬದುಕು ಸಂಪೂರ್ಣ ದುಸ್ತರವಾಗಿದೆ. ಹೈನುಗಾರರಿಗೆ ಕೊಡುವ ‘ಆಸರೆ’ ಸಾಮಾನ್ಯ ಜನರ ‘ಆಕ್ರೋಶ’ವಾಗಿ ಮಾರ್ಪಡುವ ಮುನ್ನ, ಸಿಂಹಾಸನದಲ್ಲಿ ಕುಳಿತ ಆಡಳಿತಗಾರರು ಕಣ್ಣು ತೆರೆಯಬೇಕಿದೆ.
