ಬೆಂಗಳೂರು: ರಾಜ್ಯಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಕೋಚಿಂಗ್ ಸೆಂಟರ್ಗಳು ಹಾಗೂ ಟ್ಯೂಷನ್ ತರಗತಿಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಹೊಸ ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು ಅಥವಾ ಕೋಚಿಂಗ್ ಸೆಂಟರ್ಗಳ ಕರಡು ನಿಯಮ 2026 ಅನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.


ಆನ್ಲೈನ್ ಮತ್ತು ಆಫ್ಲೈನ್ ಸೇರಿದಂತೆ ಎಲ್ಲಾ ರೀತಿಯ ಖಾಸಗಿ ಕೋಚಿಂಗ್ ಸೆಂಟರ್ಗಳ ನಿಯಂತ್ರಣಕ್ಕೆ ಈ ಕರಡು ನಿಯಮದಲ್ಲಿ ಹಲವು ಕಠಿಣ ಮಾರ್ಗಸೂಚಿಗಳನ್ನ ರೂಪಿಸಲಾಗಿದೆ. ಹೊಸ ನಿಯಮಾವಳಿಗಳು ಜಾರಿಗೆ ಬಂದರೆ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ, ವಿಶೇಷವಾಗಿ ಖಾಸಗಿ ಟ್ಯೂಷನ್ ವಲಯದಲ್ಲಿ ದೊಡ್ಡ ಬದಲಾವಣೆಯಾಗಲಿದೆ.

15 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ ಹೊಸ ಕರ್ನಾಟಕ ಕೋಚಿಂಗ್ ಸೆಂಟರ್ ನಿಯಮಗಳ ಪ್ರಕಾರ, ಯಾವುದೇ ಕೋಚಿಂಗ್ ಸೆಂಟರ್ಗಳು 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತಿಲ್ಲ. ಪ್ರೌಢಶಾಲಾ ಶಿಕ್ಷಣ ಮುಗಿದ ನಂತರವಷ್ಟೇ ವಿದ್ಯಾರ್ಥಿಗಳು ಇಂತಹ ಕೇಂದ್ರಗಳಿಗೆ ಸೇರಲು ಅರ್ಹರಿರುತ್ತಾರೆ. ಅಲ್ಲದೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ತಗ್ಗಿಸಲು ತರಗತಿಗಳಿಗೆ ಸಮಯದ ಮಿತಿಯನ್ನು ಹೇರಲಾಗಿದೆ. ಪರೀಕ್ಷೆ, ರಿವಿಷನ್ ತರಗತಿಗಳು ಸೇರಿದಂತೆ ಒಟ್ಟು ತರಗತಿಯ ಅವಧಿ ದಿನಕ್ಕೆ 5 ಗಂಟೆ ಮಾತ್ರ ಇರಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯೊಳಗೆ ಮಾತ್ರ ತರಗತಿಗಳನ್ನು ನಡೆಸಬೇಕು.
ಶಾಲಾ-ಕಾಲೇಜುಗಳ ಸಾಮಾನ್ಯ ಅವಧಿಯಲ್ಲಿ ಟ್ಯೂಷನ್ ಕ್ಲಾಸ್ಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಡ್ಡಾಯ ನೋಂದಣಿ ಹಾಗೂ 5 ಲಕ್ಷ ರೂ ದಂಡ
20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಹೊಂದಿರುವ ಪ್ರತಿಯೊಂದು ಕೋಚಿಂಗ್ ಸೆಂಟರ್ ಸೇವಾ ಸಿಂಧು ಪೋರ್ಟಲ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ 15,000 ರೂ. ಮತ್ತು ಪ್ರತಿ ಕೋರ್ಸ್ಗೆ ಹೆಚ್ಚುವರಿಯಾಗಿ 5,000 ರೂ. ಪಾವತಿಸಬೇಕಾಗುತ್ತದೆ. ಒಮ್ಮೆ ಪಡೆದ ನೋಂದಣಿಯು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು ನಿಯಮ ಜಾರಿಯಾದ 90 ದಿನಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ನಿಯಮಗಳನ್ನ ಉಲ್ಲಂಘಿಸಿದರೆ ಅಥವಾ ನೋಂದಣಿ ಮಾಡದೆ ಕೇಂದ್ರಗಳನ್ನು ನಡೆಸಿದರೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ, ಜೊತೆಗೆ ಸಂಸ್ಥೆಯನ್ನು ಸೀಲ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.
