ಮೂಡುಬಿದಿರೆ: ಆಳ್ವಾಸ್ ಪ್ರಗತಿ-2026ರ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಮೊದಲ ದಿನವೇ 13.016 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಉದ್ಯೋಗಾವಕಾಶಗಳತ್ತ ಹೆಜ್ಜೆ ಇಟ್ಟರು. ಮೇಳದಲ್ಲಿ 326 ಕಂಪನಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 13.247 ಮಂದಿ ಆನ್ಲೈನ್ ಹಾಗೂ 83 ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ.


ವಿಶೇಷಚೇತನ ಅಭ್ಯರ್ಥಿ ಭಾಗ್ಯಶ್ರೀ ಕುಲಾಲ್ ಅಕೌಂಟೆಂಟ್ ಹುದ್ದೆಗೆ ಆಯ್ಕೆ
ಮೊದಲ ದಿನವೇ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ಪದವೀಧರೆ ಹಾಗೂ ದೈಹಿಕ ವಿಶೇಷಚೇತನ ಅಭ್ಯರ್ಥಿ ಭಾಗ್ಯಶ್ರೀ ಕುಲಾಲ್ ಅವರು ಮೈಸೂರಿನ ರೆಡ್ಡಿಸ್ ಫೌಂಡೇಷನ್ ಸಂಸ್ಥೆಯಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದರು. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಅವರು ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಮೇಳಕ್ಕೆ ಆಗಮಿಸಿ ಸಂದರ್ಶನದಲ್ಲಿ ಯಶಸ್ವಿಯಾದರು.
ಮೇಳದಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಎಸ್ಎಸ್ಎಲ್ಸಿ, ಪಿಯುಸಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.



