ಜನಪ್ರಿಯ ಧಾರಾವಾಹಿಯಿಂದ ದಿಢೀರ್ ಹೊರನಡೆದ ನಟಿ ಅಮೃತಾ ರಾಮಮೂರ್ತಿ
ಕುಲವಧು, ಕಸ್ತೂರಿ ನಿವಾಸ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ ನಟಿ ಅಮೃತಾ ರಾಮಮೂರ್ತಿ. ಸದ್ಯ ಅವರು ಅಭಿನಯಿಸುತ್ತಿದ್ದ ಜನಪ್ರಿಯ ಧಾರಾವಾಹಿಯಿಂದ ಅಮೃತಾ ದಿಢೀರ್ ಹೊರಬಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಮೊದಲಿಗೆ ಇದನ್ನು ಊಹಾಪೋಹ ಎಂದೇ ಹೇಳಲಾಗಿತ್ತು. ಆದರೆ ಖುದ್ದು ಅಮೃತಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಜನಪ್ರಿಯ ಧಾರಾವಾಹಿಯಿಂದ ಹೊರನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಆಸೆ” ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಹೀಗಾಗಿ ಅಮೃತಾ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳೂ ಇದ್ದಾರೆ. ಹೀಗಿರುವಾಗ ಅಮೃತಾ ದಿಢೀರ್ ಸೀರಿಯಲ್ನಿಂದ ಹೊರಬಂದಿರುವುದು ವೀಕ್ಷಕರಿಗೆ ಶಾಕ್ ನೀಡಿದಂತಾಗಿದೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ನಟಿ, ತಮ್ಮ ನಿರ್ಧಾರಕ್ಕೆ ಅಸಲಿ ಕಾರಣವೇನು ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
ಆಸೆ ಧಾರಾವಾಹಿಯಲ್ಲಿ ಜನಪ್ರಿಯ ರೋಹಿಣಿ ಪಾತ್ರವನ್ನು ಅಮೃತಾ ನಿರ್ವಹಿಸಿದ್ದರು. ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದಾಗಿ ನಟನೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. “ನಿಮ್ಮ ಪ್ರೀತಿಗೆ ಸದಾ ಚಿರಋಣಿ” ಎಂದು ಅಮೃತಾ ವಿಡಿಯೋದಲ್ಲಿ ತಿಳಿಸಿದ್ದಾರೆ.






