ಹಾಸನ, ಡಿಸೆಂಬರ್ 15: ಪ್ರೀತಿ ಪ್ರೇಮಕ್ಕೆ ದೇಶ ಭಾಷೆಗಳ ಗಡಿಯಿಲ್ಲ ಎನ್ನುತ್ತಾರೆ. ಹೃದಯದ ಮಾತಿಗೆ ಜಾತಿ ಧರ್ಮಗಳ ಬೇಲಿಯೂ ಅಡ್ಡ ಬರಲ್ಲ ಎಂಬ ಮಾತಿದೆ. ಹಾಸನದಲ್ಲಿ ನಡೆದ ಇದೊಂದು ವಿಶೇಷ ಪ್ರೇಮ ವಿವಾಹವು ಪ್ರೀತಿಯ ಬೆಸುಗೆ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಾರಿ ಹೇಳಿದೆ. ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ ಆದರೂ ಹೃದಯದ ಮಿಡಿತಕ್ಕೆ ಮನಸೋತ ಈ ಸುಂದರ ಜೋಡಿ ಹಿರಿಯನ್ನು ಒಪ್ಪಿಸಿ ಸತಿ ಪತಿಗಳಾಗಿದ್ದಾರೆ. ಸಾಗರದಾಚೆಯ ಇಂಗ್ಲೆಂಡ್ನ ಪ್ರೇಮಿ, ವಿಶ್ವ ವಿಖ್ಯಾತ ಐತಿಹಾಸಿಕ ನಗರಿ ಬೇಲೂರಿನ ಪ್ರೇಯಸಿಯ ಮದುವೆ ಸರಳ ಸಂಭ್ರಮದಿಂದ ಹಿಂದೂ ಸಂಪ್ರದಾಯದಂತೆ ಭಾನುವಾರ ನೆರವೇರಿದೆ.
ಇಂಗ್ಲೆಂಡ್ ಮೂಲದ ಜಾನ್ ಹಾಗೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಹೇಮಶ್ರೀ ಪಕ್ಕಾ ಹಿಂದೂ ಸಂಪ್ರದಾಯದಂತೆ ಕೈ ಹಿಡಿದಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್ ನ ಲಿವರ್ ಪೋಲ್ನಲ್ಲಿ ನೆಲೆಸಿರುವ ಬೇಲೂರಿನ ಯುವತಿ ಹೇಮಶ್ರೀಗೆ ತನ್ನದೇ ಕಚೇರಿಯಲ್ಲಿ ಕೆಲಸ ಮಾಡುವ ಜಾನ್ ಜೊತೆಗೆ ಗೆಳೆತನವಾಗಿದೆ. ಗೆಳೆತನ ಪ್ರೀತಿಯಾಗಿ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗುವ ತೀರ್ಮಾನ ಮಾಡಿದ್ದಾರೆ. ಆದ್ರೆ ಜಾತಿ ಬೇರೆ, ಧರ್ಮ ಬೇರೆ, ದೇಶ ಬೇರೆ ಭಾಷೆ ಬೇರೆ, ಮನೆಯವರು ಒಪ್ತಾರಾ ಇಲ್ಲವೋ ಎನ್ನೋ ಆತಂಕಕ್ಕೆ ತೆರೆ ಎಳೆದ ಹೆತ್ತವರು ಮಕ್ಕಳ ಆಸೆಗೆ ನೀರೆರೆದು ಹಿಂದೂ ಸಂಪ್ರದಾಯದಂತೆ ಕಂಕಣ ಭಾಗ್ಯ ಕರುಣಿಸಿದ್ದಾರೆ.






