ಬಂಟ್ವಾಳ/ಸಿದ್ದಕಟ್ಟೆ: ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚುವುದಕ್ಕಿಂತ ದೊಡ್ಡ ಧರ್ಮವಿಲ್ಲ ಎಂಬುದಕ್ಕೆ ಸಿದ್ದಕಟ್ಟೆಯ ಕುಲಾಲ ಸುಧಾರಕ ಸಂಘದ ಸದಸ್ಯರು ಜೀವಂತ ಸಾಕ್ಷಿಯಾಗಿದ್ದಾರೆ.


ಕುಕ್ಕಿಪ್ಪಾಡಿ ಗ್ರಾಮದ ಪೆಲತ್ತಬೆಟ್ಟು ಎಂಬಲ್ಲಿ ವಾಸಿಸುತ್ತಿದ್ದ ಬಡ ತಾಯಿ ಹಾಗೂ ಹೆಣ್ಣು ಮಗಳ ಮನೆ ಕುಸಿದುಬಿದ್ದು, ಅವರು ವಾಸಿಸಲು ಸೂರಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದರು. ಈ ಬಡ ಕುಟುಂಬದ ಕಣ್ಣೀರು ಒರೆಸಲು ಮುಂದೆ ಬಂದ ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘ ಹಾಗೂ ಕುಲಾಲ ಸೇವಾದಳದ ಉದಯೋನ್ಮುಖ ಮನಸ್ಸುಗಳು, ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಾಣದ ಪವಿತ್ರ ಕೈಂಕರ್ಯಕ್ಕೆ ಚಾಲನೆ ನೀಡಿ ಮಾನವೀಯತೆಯ ಹೊಸ ಅಧ್ಯಾಯ ಬರೆದಿವೆ.
ಆರ್ಥಿಕ ಅಭಾವ ಹಾಗೂ ನಾನಾ ಸವಾಲುಗಳಿದ್ದರೂ ಧೃತಿಗೆಡದ ಸಂಘದ ಸದಸ್ಯರು, ಕಳೆದ ಆರು ವಾರಗಳಿಂದ ಸ್ವತಃ ತಮ್ಮ ಬೆವರು ಹರಿಸಿ ಶ್ರಮದಾನದ ಮೂಲಕ ಪಾಯದಿಂದ ಹಿಡಿದು ಗೋಡೆಗಳ ವರೆಗೆ ಕಟ್ಟಿಕೊಟ್ಟಿದ್ದಾರೆ. ಇತ್ತೀಚೆಗೆ ಬಿಸಿಲ ತಾಪವನ್ನೂ ಲೆಕ್ಕಿಸದೆ ಹಂಚುಗಳಿಗೆ ಬಣ್ಣ ಬಳಿದು, ಮನೆಗೆ ಹಂಚು ಹಾಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಕಷ್ಟದಲ್ಲಿದ್ದ ತಾಯಿ-ಮಗಳ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.
ಸ್ವಂತ ಸೂರಿಲ್ಲದೆ ಕತ್ತಲಲ್ಲಿ ಕಣ್ಣೀರಿಡುತ್ತಿದ್ದ ತಾಯಿ-ಮಗಳ ಬಾಳಿಗೆ ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘ ಹಾಗೂ ಸೇವಾದಳದ ಸದಸ್ಯರು ಆಶಾಕಿರಣವಾಗಿದ್ದಾರೆ. ತಮ್ಮ ಸ್ವಂತ ಕೆಲಸ-ಕಾರ್ಯಗಳನ್ನು ಬದಿಗೊತ್ತಿ, ಬಿಸಿಲನ್ನೂ ಲೆಕ್ಕಿಸದೆ ಪ್ರೀತಿ-ಕಾಳಜಿಯಿಂದ ಇವರು ಕಟ್ಟಿಕೊಡುತ್ತಿರುವ ಈ ‘ಬೆವರಿನ ಮನೆ’ ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಬದಲಿಗೆ ಸಮಾಜಕ್ಕೆ ಮಾನವೀಯತೆಯ ದಿವ್ಯ ಸಂದೇಶ. ಅಡೆತಡೆಗಳ ನಡುವೆಯೂ ಕಷ್ಟದಲ್ಲಿದ್ದ ಕುಟುಂಬಕ್ಕೆ ಹೊಸ ಬದುಕು ಕಟ್ಟಿಕೊಡುತ್ತಿರುವ ಈ ಯುವಕರ ನಿಸ್ವಾರ್ಥ ಸೇವೆ ಹಾಗೂ ದಾನಿಗಳ ಔದಾರ್ಯ ನಿಜಕ್ಕೂ ಸರ್ವ ಶ್ಲಾಘನೀಯ.
ಸೇವಾದಳದ ದಳಪತಿ ಚಂದ್ರಶೇಖರ ಶಿವಾಜಿನಗರ, ಪ್ರಮುಖರಾದ ಪುರುಷೋತ್ತಮ ಸೌತೆಬಳ್ಳಿ, ಯಾದವ ಅಗ್ರಬೈಲು, ಕವಿತಾ ಯಾದವ್ ಸೇರಿದಂತೆ ಹಲವು ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ ನಿರ್ಮಾಣ ಕಾಮಗಾರಿಗೆ ವೇಗ ನೀಡಿದ್ದು, ಸಮಾಜ ಬಾಂಧವರ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



