ಆರಂಬೋಡಿ: ಮುಂಜಾನೆಯ ನೀರವತೆಯನ್ನು ಸೀಳಿಕೊಂಡು ಬಂದ ಭೀಕರ ಸಿಡಿಲಿಗೆ ಮನೆಯೊಂದು ಜವರಾಯನ ಅಟ್ಟಹಾಸಕ್ಕೆ ಬಲಿಯಾದ ಭೀಕರ ಘಟನೆ ಅಜ್ಜಿಬೆಟ್ಟು ಗ್ರಾಮದ ಆನೆದೋಡಿಯಲ್ಲಿ ನಡೆದಿದೆ. ಸಿಡಿಲಿನ ಆರ್ಭಟಕ್ಕೆ ನಾಗೇಶ್ ಕುಲಾಲ್ ಅವರ ನಿವಾಸ ಸಂಪೂರ್ಣ ಹಾನಿಯಾಗಿದ್ದು, ಅವರ ಪತ್ನಿ ಕುಸಲಾಕ್ಷಿ ತೀವ್ರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಅಜ್ಜಿಬೆಟ್ಟು ಗ್ರಾಮದ ಆನೆದೋಡಿ ನಿವಾಸಿ ನಾಗೇಶ್ ಕುಲಾಲ್ ಎಂಬವರ ಮನೆಗೆ ಮುಂಜಾನೆಯ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ತೀವ್ರತೆಗೆ ಮನೆಯ ಮಹಡಿ, ಹಂಚು, ಸಿಮೆಂಟ್ ಶೀಟ್ಗಳು ಸಂಪೂರ್ಣವಾಗಿ ಧರಾಶಾಹಿಯಾಗಿದ್ದು, ಒಳಗಿದ್ದ ಗೃಹಬಳಕೆಯ ವಸ್ತುಗಳು ಸಂಪೂರ್ಣ ಹಾನಿಗೊಂಡಿವೆ.
ಸಿಡಿಲಿನ ಆಘಾತದಿಂದ ಮನೆಯ ಜತೆಗೆ ಬದುಕಿನ ಆಸರೆಯನ್ನೇ ಕಳೆದುಕೊಂಡಿರುವ ನಾಗೇಶ್ ಕುಲಾಲ್ ಅವರ ಕುಟುಂಬಕ್ಕೆ ಈಗ ತಕ್ಷಣದ ತುರ್ತು ನೆರವು ಹಾಗೂ ವೈದ್ಯಕೀಯ ನೆರವಿನ ಅಗತ್ಯವಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಕುಸಲಾಕ್ಷಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವ ಜತೆಗೆ, ಪ್ರಕೃತಿ ವಿಕೋಪದ ಈ ಭೀಕರ ಹಾನಿಗೆ ಸರ್ಕಾರ ಹಾಗೂ ಸ್ಥಳೀಯಾಡಳಿತ ತಕ್ಷಣವೇ ಸೂಕ್ತ ಪರಿಹಾರ ಒದಗಿಸಿ, ನಿರಾಶ್ರಿತ ಕುಟುಂಬಕ್ಕೆ ಮರುಜೀವ ನೀಡಬೇಕಿದೆ



