ನಿರ್ವಹಣೆಯಿಲ್ಲದೆ ಸೊರಗಿಹೋಗಿರುವ ಗುರುವಾಯನಕೆರೆ-ವೇಣೂರು ಹೆದ್ದಾರಿ
ವೇಣೂರು: ಮುಂಗಾರು ಸುರಿಯುತ್ತಿದ್ದಂತೆ ಅಲ್ಲಲ್ಲಿ ಗುಂಡಿಬಿದ್ದು ಸಂಚಾರಕ್ಕೆ ತೊಡಕಾಗಿದ್ದ ವೇಣೂರು -ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪಡಂಗಡಿಯಲ್ಲಿ ಇಂದು ಕಾರ್ಯ ಮಾಡಲಾಯಿತು.

ಆದರೆ ಇದು ಹೆದ್ದಾರಿ ಇಲಾಖೆಯಿಂದ ನಡೆದ ದುರಸ್ತಿ ಕಾಮಕಾರಿ ಅಲ್ಲ. ಪಡಂಗಡಿಯ ಪ್ರಮುಖ ಮುಖಂಡರು ಸೇರಿ ಹೆದ್ದಾರಿಯಲ್ಲಿದ್ದ ಅಪಾಯಕಾಗಿ ಗುಂಡಿಗಳಿಗೆ ಜಲ್ಲಿಹಾಕಿ ತಾತ್ಕಾಲಿಕ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಸಂತೋಷ್ ಕುಮಾರ್ ಜೈನ್, ರಿಚರ್ಡ್ ಗೋವಿಯಸ್, ಪ್ರಕಾಶ್ ಜೈನ್, ಪದ್ಮನಾಭ ಶೆಟ್ಟಿ ಹಲ್ಲಂದೋಡಿ ಹಾಗೂ ಸ್ಥಳೀಯ ಮತ್ತಿತರ ಪ್ರಮುಖರು ಸೇರಿ ದುರಸ್ತಿ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಸಾನಿಧ್ಯ ರೆಡಿಮಿಕ್ಸ್ ಘಟಕ ಸಹಕರಿಸಿದೆ ಎಂದು ಸಂತೋಷ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ನಿರ್ವಹಣೆಯಿಲ್ಲದೆ ಸೊರಗಿಹೋದ ಹೆದ್ದಾರಿ!
ಹೌದು, ಗುರುವಾಯನಕೆರೆಯಿಂದ ವೇಣೂರು ಸಂಪರ್ಕಿಸುವ ರಾಜ್ಯಹೆದ್ದಾರಿ ೭೦ರನ್ನು ನಿರ್ವಹಣೆ ಮಾಡುವವರೇ ಇಲ್ಲವಾಗಿದೆ. ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ಮಳೆ ಹಾಗೂ ಚರಂಡಿ ನೀರು ಹೆದ್ದಾರಿಯಲ್ಲೇ ಹರಿಯುವಂತಾಗಿದೆ. ಇದು ಹೆದ್ದಾರಿ ಹಾಳಾಗಲು ಪ್ರಮುಖ ಕಾರಣವಾಗಿದೆ. ಗುರುವಾಯನಕೆರೆಯಿಂದ ವೇಣೂರು, ಪಡ್ಡಂದಡ್ಕದವರೆಗೆ ಹೆದ್ದಾರಿಯ ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳು ನಿರ್ಮಾಣವಾಗಿದೆ. ಹೆದ್ದಾರಿ ಬದಿ ಇದ್ದ ಚರಂಡಿಗಳೂ ಹೂಳು ತುಂಬಿ ಮುಚ್ಚಿಹೋಗಿವೆ. ನಿರ್ವಹಣೆ ಮಾಡಬೇಕಾದ ಹೆದ್ದಾರಿ ಇಲಾಖೆ ಮಾತ್ರ ಕುರುಡತನ ಪ್ರದರ್ಶಿಸುತ್ತಿದೆ ಅನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.



