ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು ಯಾವುದಾದೂ ಸಂದರ್ಭದಲ್ಲಿ ತಮ್ಮ ಕ್ರೆಡಿಟ್ ಲಿಮಿಟ್ ಇದ್ದಕ್ಕಿದ್ದಂತೆ ಕಡಿಮೆ ಆಗಿರುವುದು ಗಮನಕ್ಕೆ ಬಂದಿರಬಹುದು. ರೆಗ್ಯುಲರ್ ಆಗಿ ಬಳಸುತ್ತಿರುವ ಕ್ರೆಡಿಟ್ ಕಾರ್ಡ್ನಲ್ಲಿ ಮಿತಿಯನ್ನು ದಿಢೀರ್ ಇಳಿಸಿರುವುದು, ಅದೂ ನಿಮಗೆ ಸುಳಿವೇ ಇಲ್ಲದಂತೆ ಕತ್ತರಿ ಹಾಕಿರುವುದು ಅಚ್ಚರಿ ತಂದಿರಬಹುದು. ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಈ ಕ್ರಮ ತೆಗೆದುಕೊಳ್ಳಲು ಕಾರಣಗಳಿವೆ. ನಿಮ್ಮ ಕ್ರೆಡಿಟ್ ಕಾರ್ಡ್ ನಿರ್ವಹಣೆ ಹೇಗಿದೆ ಎನ್ನುವುದು ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕ್ರೆಡಿಟ್ ಲಿಮಿಟ್ ಅನ್ನು ಕಡಿಮೆ ಮಾಡಲು ಪ್ರಮುಖ ಕಾರಣಗಳೇನು ಎನ್ನುವ ವಿವರ ಇಲ್ಲಿದೆ.

1. ಪಾವತಿಯಲ್ಲಿ ಶಿಸ್ತು ಇಲ್ಲದಿರುವುದು
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಶಿಸ್ತು ಇಲ್ಲದಿದ್ದರೆ ಬ್ಯಾಂಕುಗಳು ಬೇಗ ಗಮನಿಸುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ತಡವಾಗಿ ಪಾವತಿಸಿದರೆ, ಅಥವಾ ಕನಿಷ್ಠ ಬಾಕಿಯನ್ನು ಮಾತ್ರ ಪಾವತಿಸುವ ಪ್ರವೃತ್ತಿ ಇದ್ದರೆ ಆಗ ಬ್ಯಾಂಕುಗಳು ನಿಮ್ಮ ಕಾರ್ಡ್ನ ಕ್ರೆಡಿಟ್ ಮಿತಿಯನ್ನು ಇಳಿಸುವ ನಿರ್ಧಾರಕ್ಕೆ ಬರಬಹುದು.
2. ಅತಿಯಾಗಿ ಕಾರ್ಡ್ ಬಳಕೆ
ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಹಳ ನಿಯಮಿತವಾಗಿ ಮತ್ತು ಅತಿಯಾಗಿ ಬಳಸುತ್ತಿರುವುದನ್ನು ನಕಾರಾತ್ಮಕ ಸಿಗ್ನಲ್ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ.
3. ಕಾರ್ಡನ್ನೇ ಬಳಸದಿದ್ದರೆ
ಕ್ರೆಡಿಟ್ ಕಾರ್ಡ್ ಅನ್ನು ಅತಿಯಾಗಿ ಬಳಸಿದರೂ ಕಷ್ಟ, ಕಾರ್ಡ್ ಅನ್ನು ಬಳಸದೇ ಇದ್ದರೂ ಕಷ್ಟ. ನೀವು ಒಂದು ಕ್ರೆಡಿಟ್ ಕಾರ್ಡ್ ಪಡೆದು ಅದನ್ನು ದೀರ್ಘ ಕಾಲ ಬಳಸದಿದ್ದರೆ, ಆ ಕಾರ್ಡ್ ಸುದೀರ್ಘ ಕಾಲ ನಿಷ್ಕ್ರಿಯವಾಗಿದ್ದರೆ ಬ್ಯಾಂಕು ಆ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಿ, ಬೇರೆಡೆ ಉಪಯೋಗಿಸಬಹುದು.
4. ಕ್ರೆಡಿಟ್ ಸ್ಕೋರ್ ಕಡಿಮೆಗೊಂಡರೆ…
ನಿಮ್ಮ ನಿಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಆದಾಗ ಅದು ಬೇಗ ಕ್ರೆಡಿಟ್ ಕಾರ್ಡ್ ಕಂಪನಿಗಳ ಗಮನಕ್ಕೆ ಬರುತ್ತದೆ. ಕೂಡಲೇ ಅವು ಕ್ರೆಡಿಟ್ ಮಿತಿಯನ್ನು ಪರಿಷ್ಕರಿಸಬಹುದು.
ಕ್ರೆಡಿಟ್ ಕಾರ್ಡ್ ಹೇಗೆ ಬಳಸಬೇಕು; ಇಲ್ಲಿದೆ ಟಿಪ್ಸ್
ಕ್ರೆಡಿಟ್ ಕಾರ್ಡ್ಗೆ ನೀಡಲಾಗಿರುವ ಕ್ರೆಡಿಟ್ ಲಿಮಿಟ್ನಲ್ಲಿ ಶೇ. 30ಕ್ಕಿಂತ ಹೆಚ್ಚು ಬಳಕೆಯಾಗದಂತೆ ನೋಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಮತ್ತು ನಿಗದಿತ ದಿನದೊಳಗೆ ಪಾವತಿಸುವುದನ್ನು ಮರೆಯದಿರಿ. ಇದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ಗಳಿಸಬಹುದು.



