ಬಂಟ್ವಾಳ: ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಪರಿಣಾಮ ಬಸ್ನಲ್ಲಿದ್ದ 5 ವರ್ಷದ ಪುಟ್ಟ ಕಂದಮ್ಮ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಬಿಳಿಯೂರಿನ ಚಂದ್ರಹಾಸ ಅವರ ಪುತ್ರಿ ಚಿರನ್ವಿ ಮೃತಪಟ್ಟಿದ್ದಾರೆ.

ಇಂದು ಸಂಜೆ ಶಾಲೆ ಮುಗಿಸಿ ಮಕ್ಕಳನ್ನು ಮನೆಗೆ ಬಿಡುವ ವೇಳೆ ಈ ದುರಂತ ಸಂಭವಿಸಿದೆ. ಕಲ್ಲಡ್ಕ ಶ್ರೀರಾಮ ಶಾಲೆಗೆ ಸೇರಿದ ಶಾಲಾ ವಾಹನದ ಮೇಲೆ ಬಂಟ್ವಾಳ ತಾಲೂಕಿನ ಕಲ್ಲೇಟಿ ಕಾನಲ್ತಾಯ ದೈವಸ್ಥಾನದ ಬಳಿ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ನಲ್ಲಿದ್ದ ಬಾಲಕಿ ಚಿರನ್ವಿ ಸೇರಿದಂತೆ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ದಾರಿ ಮಧ್ಯೆ ಚಿರನ್ವಿ ಕೊನೆಯುಸಿರು
ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಚಿರನ್ವಿಯನ್ನ ಸ್ಥಳೀಯ ಮಹಿಳೆಯೊಬ್ಬರು ತಕ್ಷಣವೇ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬರುತ್ತಿದ್ದರು. ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ದಾರಿ ಮಧ್ಯೆ ಚಿರನ್ವಿ ಸಾವನ್ನಪ್ಪಿದ್ದಾಳೆ. ಇನ್ನು ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನು ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇನ್ನು, ದುರ್ಘಟನೆಯ ಬೆನ್ನಲ್ಲೇ ಬಂಟ್ವಾಳ ತಹಶೀಲ್ದಾರ್ ಪುತ್ತೂರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು, ಮೃತಪಟ್ಟ ಚಿರನ್ವಿ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



