ಗುರುಪುರ: ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಯುವಶಕ್ತಿಯ ಕೊಡುಗೆ ಹೇಗಿರಬಹುದು ಎಂಬುದಕ್ಕೆ ಗುರುಪುರ ಸಮೀಪದ ಬಂಡಸಾಲೆಯಲ್ಲಿ ನಿರ್ಮಾಣಗೊಂಡಿರುವ ಬಸ್ ಮಾದರಿಯ ಪ್ರಯಾಣಿಕರ ತಂಗುದಾಣ ಮಾದರಿಯಾಗಿದೆ. ವಿ2 ಗೈಸ್ ತಂಡದ ಕನಸಿನ ಫಲವಾಗಿ ರೂಪುಗೊಂಡಿರುವ ಈ ತಂಗುದಾಣ ತನ್ನ ವಿಶಿಷ್ಟ ವಿನ್ಯಾಸ, ಆಧುನಿಕ ಸೌಲಭ್ಯಗಳು ಹಾಗೂ ಸಾಮಾಜಿಕ ಕಾಳಜಿಯಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾನ್ಯ ತಂಗುದಾಣಕ್ಕಿಂತ ಭಿನ್ನವಾಗಿ, ಹಳೆಯ ಬಸ್ವೊಂದನ್ನು ಪರಿವರ್ತಿಸಿ ನಿರ್ಮಿಸಲಾಗಿರುವ ಈ ತಂಗುದಾಣ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಆರಂಭದಲ್ಲಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುವ ಉದ್ದೇಶ ಹೊಂದಿದ್ದ ತಂಡ, ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಯನ್ನು ವಿಸ್ತರಿಸಿ ಸುಮಾರು 6 ರಿಂದ 7 ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿರ್ಮಿಸಿದೆ.

ನೀರು ಹರಿಯುವ ತಗ್ಗು ಪ್ರದೇಶದಲ್ಲಿ ತಂಗುದಾಣ ಇರುವುದರಿಂದ ಸುರಕ್ಷತೆಗೆ ಆದ್ಯತೆ ನೀಡಿ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಹಿಂದೆ ಇದ್ದ ತಂಗುದಾಣ ತಡೆಗೋಡೆ ಕೊರತೆಯಿಂದ ಹಾನಿಗೊಳಗಾಗಿದ್ದ ಹಿನ್ನೆಲೆ ಈ ಕ್ರಮಕ್ಕೆ ಕಾರಣವಾಗಿದೆ. ಒಮ್ಮೆಗೇ 16 ರಿಂದ 17 ಮಂದಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯ ಕಲ್ಪಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಆರಾಮದಾಯಕ ಆಸನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪುಟ್ಟ ಗ್ರಂಥಾಲಯ, ಸಿಸಿಟಿವಿ ಕ್ಯಾಮೆರಾಗಳು, ಸೋಲಾರ್ ದೀಪಗಳು ಹಾಗೂ ಹೊರಭಾಗದಲ್ಲಿ ಉದ್ಯಾನವನ್ನು ನಿರ್ಮಿಸಲಾಗಿದೆ.
ತಂಗುದಾಣವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ವಿ2 ಗೈಸ್ ತಂಡ, ಮದ್ಯಪಾನ, ಧೂಮಪಾನ ಹಾಗೂ ಅಸಭ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ದೂರು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಯೋಜನೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು. ತಂಡದ ಸದಸ್ಯರ ಜತೆಗೆ ಹಲವು ದಾನಿಗಳ ಸಹಕಾರ ದೊರೆತಿದೆ. ಗುರುಪುರ ಕೆನರಾ ಬ್ಯಾಂಕ್ ಶಾಖೆ ಕುಡಿಯುವ ನೀರಿನ ವ್ಯವಸ್ಥೆಗೆ ನೆರವು ನೀಡಿದೆ. ಲೋಕಾರ್ಪಣೆ ಬಳಿಕ ತಂಗುದಾಣವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದು ತಂಡದ ಶ್ರಮಕ್ಕೆ ಸಿಕ್ಕಿರುವ ಪ್ರತಿಫಲವಾಗಿದೆ ಎಂದು ವಿ2 ಗೈಸ್ ತಂಡದ ಸದಸ್ಯ ಪ್ರಶಾಂತ್ ಗುರುಪುರ ತಿಳಿಸಿದ್ದಾರೆ.
ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಯುವಕರ ಪಾಲ್ಗೊಳ್ಳುವಿಕೆಯಿಂದ ನಿರ್ಮಾಣಗೊಂಡಿರುವ ಈ ತಂಗುದಾಣ ಇತರರಿಗೆ ಪ್ರೇರಣೆಯಾಗಬೇಕು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ತಂಗುದಾಣ ಉದ್ಘಾಟಿಸಿ ಯುವಕರ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು. ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುಪುರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಲೋಕನಾಥ್ ಗೌಡ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟಿಸಿದರು. ಜಯರಾಜ್ ಗುರುಪುರ, ರವಿರಾಜ್ ಶೆಟ್ಟಿ ನಿಟ್ಟಿಗುತ್ತು. ರೊನಾಲ್ ಫರ್ನಾಂಡಿಸ್, ರಾಜೇಶ್ ಕೊಟ್ಟಾರಿ, ದೇವಪ್ಪ ಪೂಜಾರಿ, ಸಚಿನ್ ಅಡಪ, ಸುನೀಲ್ ಜಲ್ಲಿಗುಡ್ಡೆ ಸೇರಿದಂತೆ ಹಲವು ಗಣ್ಯರು, ಗ್ರಾಮಸ್ಥರು ಹಾಗೂ ವಿ2 ಗೈಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.



