ನವದೆಹಲಿ, ಜೂ. 10: ಭಾರತದ ರಾಜಕೀಯ ಇತಿಹಾಸದಲ್ಲಿ ಇಂದು ( ಜೂನ್ 10, 2026) ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕುವ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪರಮೋಚ್ಚ ಪ್ರಧಾನಿ ಎಂಬ ಅಭೂತಪೂರ್ವ ಇತಿಹಾಸ ಬರೆದಿದ್ದಾರೆ.
ಬುಧವಾರದ ಇಂದಿನ ದಿನಕ್ಕೆ ಪ್ರಧಾನಿ ಮೋದಿ ಅವರು ಪ್ರಧಾನಿಯಾಗಿ ಸತತ 4,399 ದಿನಗಳ ಸುಸ್ಥಿರ ಆಡಳಿತವನ್ನು ಪೂರ್ಣಗೊಳಿಸಿದ್ದು, ಜಾಗತಿಕ ರಂಗದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
1952 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಜವಾಹರಲಾಲ್ ನೆಹರು, ಆ ವರ್ಷ ಮೇ 13 ರಂದು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಮೇ 27, 1964 ರವರೆಗೆ ಆ ಹುದ್ದೆಯಲ್ಲಿ 4,398 ದಿನಗಳ ಕಾಲ ನಿರಂತರ ಅಧಿಕಾರಾವಧಿಯನ್ನು ಪೂರೈಸಿದ್ದರು. 1947 ರಿಂದ 1952 ರವರೆಗಿನ ಅವರ ಹಿಂದಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದರು, ಆಗ ಸಾರ್ವತ್ರಿಕ ಚುನಾವಣೆಗಳು ಇನ್ನೂ ನಡೆದಿರಲಿಲ್ಲ.
ಜನಾದೇಶದ ಭದ್ರ ಬುನಾದಿ: ಮೋದಿಯವರ ವಿಜಯಯಾತ್ರೆ ಮೇ 26, 2014 ರಂದು ದೇಶದ ಜನಸಾಮಾನ್ಯರ ಆಕಾಂಕ್ಷೆಗಳ ಪ್ರತಿರೂಪವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. ತದನಂತರ ಅವರ ಜನಪ್ರಿಯತೆ ಮತ್ತು ಸುಧಾರಣಾವಾದಿ ಆಡಳಿತಕ್ಕೆ ಮನಸೋತ ಭಾರತದ ಜನತೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತಷ್ಟು ಭಾರಿ ಬಹುಮತದೊಂದಿಗೆ ಅವರನ್ನು ದ್ವಿತೀಯ ಅವಧಿಗೆ (ಮೇ 30, 2019) ಆಯ್ಕೆ ಮಾಡಿದರು. ಮುಂದುವರಿದು, ಜೂನ್ 9, 2024 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ರಾಜಕೀಯ ಸ್ಥಿರತೆ ಮತ್ತು ನಿರಂತರ ಅಭಿವೃದ್ಧಿಯ ಹೊಸ ಯುಗಕ್ಕೆ ಅವರು ನಾಂದಿ ಹಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವುದು ಮತ್ತು ಅವರು ದೇಶದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿರುವುದನ್ನು ಸಂಭ್ರಮಿಸಲು ಎನ್ಡಿಎ ಭಾರತ್ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.





