ವೇಣೂರು: ಇಲ್ಲಿಯ ಆರಂಬೋಡಿ ನಿಡ್ಯಾಲಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಸುಮಾರು 12 ಲೋಡ್ ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿ ಸುಂದರ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಮರಳನ್ನು ಮುಟ್ಟುಗೋಲು ಹಾಕಿದ್ದಾರೆ. ಸ್ಥಳೀಯರಾದ ದಿನೇಶ್ ಕುಲಾಲ್ ಎಂಬವರು ತಮ್ಮ ಟಿಪ್ಪರ್ನಲ್ಲಿ ಅಂಗರಕರಿಯದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮರಳನ್ನು ತಂದು ತನ್ನ ಜಾಗದಲ್ಲಿ ಮಾರಾಟಮಾಡಿ ಹಣ ಗಳಿಸುವ ಉದ್ದೇಶದಿಂದ ಮರಳನ್ನು ಶೇಖರಿಸಿರುವುದಾಗಿ ತನಿಖೆ ವೇಳೆ ಗೊತ್ತಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





