ಬಂಟ್ವಾಳ: ಕರಾವಳಿ ತುಳುನಾಡಿನ ಸುಪ್ರಸಿದ್ಧ ದೇವೀಕ್ಷೇತ್ರ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಜುಲೈ ತಿಂಗಳಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯು ಜರಗಲಿದ್ದು, ಅದರ ಪೂರ್ವಭಾವಿಯಾಗಿ ಭಕ್ತರ ಸಮಾಲೋಚನ ಸಭೆ ಜೂ. 14ರಂದು ಬೆಳಿಗ್ಗೆ 10-00 ಗಂಟೆಯಿಂದ ಶ್ರೀಧಾಮದಲ್ಲಿ ನಡೆಯಲಿದೆ.
ಜು. 12ರಿಂದ ಆ. 28ರವರೆಗೆ 48 ದಿನಗಳ ಕಾಲ ಮಾಣಿಲ ಶ್ರೀಧಾಮದ ಕರ್ಮಯೋಗಿ ಶ್ರೀ ಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದೆ.
ಬಂಟ್ವಾಳ ತಾಲೂಕಿನ ಗಡಿಭಾಗದ ವಿಟ್ಲ ಸನಿಹದ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ದೇವಸ್ಥಾನವು ಸಂಪತ್ತು ಮತ್ತು ಧನ ಸಮೃದ್ಧಿಯ ದಿವ್ಯ ಕ್ಷೇತ್ರವಾಗಿದೆ. ಎಷ್ಟು ಸಂಪಾದಿಸಿದರೂ ಹಣ ಉಳಿಯುತ್ತಿಲ್ಲ ಎನ್ನುವವರು, ಕೌಟುಂಬಿಕ ಆರ್ಥಿಕ ಅಭದ್ರತೆಯಿಂದ ಮಾನಸಿಕ ಒತ್ತಡ ಅನುಭವಿಸುತ್ತಿರುವವರು ಮತ್ತು ಜಾತಕದಲ್ಲಿ ಶುಕ್ರ ಗ್ರಹ ಬಲಹೀನವಾಗಿರುವವರು ಈ ಕ್ಷೇತ್ರಕ್ಕೆ ಭೇಟಿ ನೀಡುವುದು ಸೂಕ್ತ. ಇಲ್ಲಿನ ಶಕ್ತಿಯು ಬಡತನದ ಮನಸ್ಥಿತಿಯಿಂದ ಮನುಷ್ಯನನ್ನು ಹೊರತಂದು, ಸಮೃದ್ಧಿಯನ್ನು ಸ್ವೀಕರಿಸುವಂತೆ ಮಾಡುತ್ತದೆ.





