ಬೆಂಗಳೂರು, ಜೂನ್ 22: ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ಮತ್ತು ಸಾಮಾನ್ಯ ರೋಗಿಗಳಿಗೆ ಸ್ಪಂದಿಸಲು ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಗೊಂದಲಗಳು ಹಾಗೂ ಸಿಬ್ಬಂದಿಗಳ ನಡೆಗಳ ಕುರಿತಾದ ದೂರುಗಳನ್ನು ಆಲಿಸಲು ಆರೋಗ್ಯ ಸಚಿವರ ಕಚೇರಿಯಿಂದಲೇ ನೇರವಾಗಿ ನಿಯಂತ್ರಿಸಲ್ಪಡುವ 24×7 ಹೆಲ್ಪ್ಲೈನ್ (ಸಹಾಯವಾಣಿ) ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ಆಸ್ಪತ್ರೆಗಳಿಗೆ ಭೇಟಿ ನೀಡುವ ರೋಗಿಗಳಿಗೆ ಅನೇಕ ಅನುಮಾನಗಳಿರುತ್ತವೆ. ಆದರೆ ಹಲವು ಸಂದರ್ಭಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ದೂರುಗಳಿವೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೊಸದಾಗಿ ಆರಂಭಿಸಲಾಗುವ ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಕಡ್ಡಾಯವಾಗಿ ಪ್ರದರ್ಶಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್, ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಣಿ ವಿಳಂಬ ಮಾಡುವುದು ಅಥವಾ ರೋಗಿಗಳಿಂದ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಡುವ ಆಸ್ಪತ್ರೆಗಳ ವಿರುದ್ಧ ಈ ಹೆಲ್ಪ್ಲೈನ್ ಮುಖಾಂತರ ಸಾರ್ವಜನಿಕರು ನೇರವಾಗಿ ದೂರು ನೀಡಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಫಲಾನುಭವಿಗಳಿಂದ ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡಬಾರದು ಮತ್ತು ಆಸ್ಪತ್ರೆಗಳೊಂದಿಗಿನ ವಿವಾದಗಳನ್ನು ಬಗೆಹರಿಸಲು ‘ಆರೋಗ್ಯ ಮಿತ್ರ’ ಸಿಬ್ಬಂದಿಯೇ ಜವಾಬ್ದಾರರಾಗಿರುತ್ತಾರೆ. ಉಚಿತ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗಳಲ್ಲಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಸೂಚಿಸಲಾಗಿದ್ದು, ಮುಂಬರುವ ವಾರಗಳಲ್ಲೇ ಈ ಹೊಸ ವ್ಯವಸ್ಥೆ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



