ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡುವ ಭಕ್ತಾದಿಗಳು ತೀವ್ರ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದು, ಮಠದ ಪ್ರಾಂಗಣದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗೆ ಭಕ್ತರು ಮನವಿ ಮಾಡಿದ್ದಾರೆ. ಬಿಸಿಲು ಹೆಚ್ಚಾಗಿರುವುದರಿಂದ ಈ ವ್ಯವಸ್ಥೆ ಮಾಡಿದರೆ ಮಂತ್ರಾಲಯಕ್ಕೆ ಬರುವ ವೃದ್ಧರು ಹಾಗೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಪ್ರತಿವರ್ಷ ಗುರುರಾಯರ ದರ್ಶನಕ್ಕೆ ಬರುವ ವಿಜಯೇಂದ್ರ ಕೆ. ಎಂಬುವವರು ತಮ್ಮ ಇತ್ತೀಚಿನ ಅನುಭವವನ್ನು ಹಂಚಿಕೊಂಡಿದ್ದು, ಚಪ್ಪಲಿ ಸ್ಟ್ಯಾಂಡ್ನಿಂದ ಮುಖ್ಯ ದ್ವಾರದವರೆಗಿನ ಸುಮಾರು 150 ಮೀಟರ್ ದೂರವನ್ನು ಬರಿಗಾಲಿನಲ್ಲಿ ಕ್ರಮಿಸುವುದು ವೃದ್ಧರು ಮತ್ತು ಮಕ್ಕಳಿಗೆ ಅಸಾಧ್ಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನೆಲದ ಬಿಸಿಯಿಂದಾಗಿ ಪಾದಗಳು ಬೊಬ್ಬೆ ಏಳುತ್ತಿದ್ದು, ಕನಿಷ್ಠ ಗೋಣಿ ಚೀಲಗಳನ್ನಾದರೂ ಹಾದಿಯುದ್ದಕ್ಕೂ ಹಾಸುವಂತೆ ಮಠದ ಮ್ಯಾನೇಜರ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಗಾಯವಾದರೆ ಕಷ್ಟ ಭಕ್ತರ ಈ ಕಳಕಳಿಗೆ ದನಿಗೂಡಿಸಿರುವ ಜಯಶ್ರೀ ಎಂಬುವವರು, ಸಕ್ಕರೆ ಕಾಯಿಲೆ (ಡಯಾಬಿಟಿಸ್) ಇರುವವರಿಗೆ ಪಾದಗಳಲ್ಲಿ ಬೊಬ್ಬೆ ಬಂದು ಗಾಯವಾದರೆ ಅದು ಗುಣವಾಗುವುದು ಕಷ್ಟಕರ. ಸಹಸ್ರಾರು ಭಕ್ತರು ಬರುವ ಇಂತಹ ಪುಣ್ಯಕ್ಷೇತ್ರಗಳಲ್ಲಿ ದಾನಿಗಳು ಮತ್ತು ಮಠದವರು ಇಂತಹ ಸಣ್ಣಪುಟ್ಟ ಅಗತ್ಯಗಳ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.





