ಮಾರುಕಟ್ಟೆಯಲ್ಲಿನ ಔಷಧಗಳ ಬೆಲೆಯ ಕರಾಳ ಸತ್ಯ ಬಿಚ್ಚಿಟ್ಟ ನ್ಯಾಯಾಲಯ

ನವದೆಹಲಿ: ಕೇಂದ್ರ ಸರ್ಕಾರವು ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಲಾಭಾಂಶವನ್ನ ಗರಿಷ್ಠ ಚಿಲ್ಲರೆ ಬೆಲೆಯ ಶೇ.30ಕ್ಕೆ ಸೀಮಿತಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಮೂಲಕ ತಿಳಿಸಿದೆ. ಆದರೆ, ಸರ್ಕಾರದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕೇವಲ ಕ್ಯಾನ್ಸರ್ ಔಷಧಿಗಳಿಗೆ ಮಾತ್ರವೇಕೆ? ರೋಗಿಗಳಿಗೆ ದಿನನಿತ್ಯ ಬೇಕಾಗುವ ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು ಎಂದು ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ.
ಕ್ಯಾನ್ಸರ್ ಔಷಧ ಬೆಲೆ ಇಳಿಕೆ ಸರಿ, ಆದರೆ ಇತರ ಮದ್ದಿನ ಕಥೆಯೇನು?
ಸೋಮವಾರ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಸರ್ಕಾರದ ಕ್ರಮವನ್ನು ಪ್ರಶ್ನಿಸಿದೆ. ಕ್ಯಾನ್ಸರ್ ಔಷಧಗಳ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಇದರಲ್ಲಿ ಸಂಪೂರ್ಣವಾಗಿ ಸಂತಸ ಪಡುವಂಥದ್ದು ಏನೂ ಇಲ್ಲ.
ಏಕೆಂದರೆ, ದೇಶದಲ್ಲಿ ಇತರ ಸಾಮಾನ್ಯ ಮತ್ತು ಅತ್ಯಗತ್ಯ ಔಷಧಿಗಳನ್ನ ಅವುಗಳ ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ರೋಗಿಗಳಿಗೆ ಹೊರೆಯಾಗುತ್ತಿರುವ ವೈದ್ಯಕೀಯ ವೆಚ್ಚವನ್ನ ತಗ್ಗಿಸಲು ಕೇವಲ ಒಂದು ವಿಭಾಗದ ಔಷಧಿ ನಿಯಂತ್ರಣ ಸಾಲದು ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ.
ಅಗತ್ಯ ಔಷಧಿಗಳ ದುಬಾರಿ ಲಾಭಾಂಶದ ಬಗ್ಗೆ ಕಳವಳ
ವಿಚಾರಣೆ ವೇಳೆ ನ್ಯಾಯಾಲಯವು ಮಾರುಕಟ್ಟೆಯಲ್ಲಿನ ಔಷಧಗಳ ಬೆಲೆಯ ಕರಾಳ ಸತ್ಯವನ್ನ ಬಿಚ್ಚಿಟ್ಟಿತು. ಉದಾಹರಣೆಗೆ, ಕೇವಲ 11 ರೂಪಾಯಿ ಬೆಲೆಯ (ತಯಾರಿಕಾ ವೆಚ್ಚ) ಸಾಮಾನ್ಯ ಸಲೈನ್ ಬಾಟಲಿಯನ್ನ ಆಸ್ಪತ್ರೆಗಳಲ್ಲಿ ಬರೋಬ್ಬರಿ 270 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ, ಭಾರತದಲ್ಲೇ ತಯಾರಾಗುವ ಸಾಮಾನ್ಯ ಕಾರ್ಡಿಯಾಕ್ ಸ್ಟೆಂಟ್ನ (ಹೃದಯಕ್ಕೆ ಅಳವಡಿಸುವ ಸ್ಟೆಂಟ್) ನಿಜವಾದ ಬೆಲೆ ಕೇವಲ 5,000 ರೂಪಾಯಿದ್ದರೆ, ಅದರ ಎಮ್ಆರ್ಪಿಯನ್ನ 25,000 ರೂಪಾಯಿ ಎಂದು ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಅಜಿಥ್ರೋಮೈಸಿನ್ನಂತಹ ಸಾಮಾನ್ಯ ಆಂಟಿಬಯೋಟಿಕ್ ಮಾತ್ರೆಯೊಂದರ ಸಗಟು ಬೆಲೆ 28 ರೂಪಾಯಿ ಆಗಿದ್ದರೂ, ಅದನ್ನು 78 ರೂಪಾಯಿಗೂ ಅಧಿಕ ಬೆಲೆಗೆ ಮಾರಲಾಗುತ್ತಿದೆ ಎಂದು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ. ಸಾರಿಗೆ, ಕಚ್ಚಾವಸ್ತು, ಹಾಗೂ ಸಂಶೋಧನಾ ವೆಚ್ಚಗಳು ಎಷ್ಟೇ ಇದ್ದರೂ ಅವು ಈಗಾಗಲೇ ಔಷಧಿಗಳ ಮೂಲ ಬೆಲೆಯಲ್ಲಿ ಸೇರಿರುತ್ತವೆ. ಹೀಗಿರುವಾಗ ತಯಾರಿಕಾ ವೆಚ್ಚಕ್ಕಿಂತ 400 ಪಟ್ಟು ಹೆಚ್ಚು ದರಕ್ಕೆ ಔಷಧಿಗಳನ್ನು ಮಾರಾಟ ಮಾಡಲು ಆಸ್ಪತ್ರೆಗಳು ಮತ್ತು ಫಾರ್ಮಾ ಕಂಪನಿಗಳಿಗೆ ಹೇಗೆ ಅವಕಾಶ ನೀಡುತ್ತೀರಿ? ಎಂದು ನ್ಯಾಯಾಧೀಶರು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದರು.
ಕ್ಯಾನ್ಸರ್ ಔಷಧಗಳ ಮಾದರಿಯಲ್ಲೇ ಎಲ್ಲಾ ಔಷಧಿಗಳಿಗೂ ಸಮಗ್ರ ಔಷಧ ದರ ಮಿತಿ ಜಾರಿಗೆ ತರುವ ನಿಟ್ಟಿನಲ್ಲಿ ಮರುಚಿಂತನೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನ ಅಕ್ಟೋಬರ್ 27ಕ್ಕೆ ಮುಂದೂಡಿದೆ.
