ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ – ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ರಾಜ್ಯದ 308 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), 12 ಉಪ ಕಾರ್ಯದರ್ಶಿಗಳು ಹಾಗೂ 74 ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.


ಈ ಸಂಬಂಧ ಇಲಾಖೆಯ ಕಾರ್ಯದರ್ಶಿ ಹಾಗೂ 12 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದಾರೆ. ವಿಬಿಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸಬೇಕು. ಈ ಗಡುವಿನೊಳಗೆ ಹಣ ಪಾವತಿಯಾಗದಿದ್ದರೆ ಸಂಬಂಧಪಟ್ಟ ಪಿಡಿಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಈ ಹಿಂದೆಯೇ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೂ ರಾಜ್ಯದ 12 ಜಿಲ್ಲೆಗಳ 311 ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಪಾವತಿಯಲ್ಲಿ ವಿಳಂಬವಾಗಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾವಾರು ವಿವರಗಳ ಪ್ರಕಾರ, ಬಾಗಲಕೋಟೆಯಲ್ಲಿ 23, ಬೆಳಗಾವಿಯಲ್ಲಿ 52, ಚಾಮರಾಜನಗರದಲ್ಲಿ 13, ಚಿಕ್ಕಮಗಳೂರಿನಲ್ಲಿ 14, ದಕ್ಷಿಣ ಕನ್ನಡದಲ್ಲಿ 15, ಹಾಸನದಲ್ಲಿ 47, ಕೊಡಗಿನಲ್ಲಿ 25, ಮಂಡ್ಯದಲ್ಲಿ 13, ಮೈಸೂರಿನಲ್ಲಿ 53, ಶಿವಮೊಗ್ಗದಲ್ಲಿ 14, ಉಡುಪಿಯಲ್ಲಿ 23 ಹಾಗೂ ವಿಜಯಪುರದಲ್ಲಿ 16 ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಪಾವತಿಯಲ್ಲಿ ವಿಳಂಬವಾಗಿದೆ. ಈ ಮೂಲಕ ಒಟ್ಟು 311 ಗ್ರಾಮ ಪಂಚಾಯತಿಗಳಲ್ಲಿ ಸಮಸ್ಯೆ ಕಂಡುಬಂದಿದೆ.


