ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈವರೆಗೆ 1.12 ಕೋಟಿ ಜನರಿಂದ ಸಹಿ ಸಂಗ್ರಹ ಮಾಡಲಾಗಿದೆ. ನ. 10ರಂದು ಆ ಸಹಿಗಳನ್ನು ಎಐಸಿಸಿ ಕಚೇರಿಗೆ ತಲುಪಿಸಲಾಗುವುದು. ಅಲ್ಲಿಂಅದ ರಾಷ್ಟ್ರಪತಿ ಅವರು ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮತದಾನವು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಸಂವಿಧಾನವು ಒಬ್ಬರಿಗೆ ಒಂದು ಮತದ ಹಕ್ಕನ್ನು ನೀಡಿದೆ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದರೂ, ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಅನುಮಾನವಿದೆ. ಬಿಜೆಪಿ ಕೂಡ ಮತಗಳ್ಳತನ ಮಾಡುವಲ್ಲಿ ನಿಸ್ಸೀಮವಾಗಿದ್ದು, ಹಲವು ರಾಜ್ಯಗಳಲ್ಲಿ ಮತಗಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದರು.
ಚುನಾವಣಾ ಅಕ್ರಮ ಸಾಕ್ಷಿಸಹಿತ ಬಯಲು:
ಬಿಜೆಪಿ ಮತ್ತು ಚುನಾವಣಾ ಆಯೋಗದ ಈ ಅಕ್ರಮವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಾಕ್ಷಿಸಹಿತ ಬಟಾಬಯಲು ಮಾಡಿದ್ದಾರೆ. ದೆಹಲಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಬಿಜೆಪಿ ನಾಯಕರು ಈಗ ಬಿಹಾರ ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. ಇದು ಸಂವಿಧಾನಬಾಹಿರವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು. ರಾಹುಲ್ ಗಾಂಧಿ ಅವರು ಮೊದಲಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಾಗಿರುವ ಮತಗಳ್ಳತನವನ್ನು ಬಯಲಿಗೆಳೆದಿದ್ದರು. ಆನಂತರ ಹಲವು ರಾಜ್ಯಗಳಲ್ಲಿ ಈ ರೀತಿ ಮತಗಳ್ಳತನ ಪತ್ತೆಯಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ವಿರುದ್ಧದ ಅಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ನ 40 ರಾಜಕೀಯ ಜಿಲ್ಲೆಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ. ರಾಜ್ಯದಲ್ಲಿ ಒಟ್ಟು 1.12 ಕೋಟಿ ಸಹಿ ಸಂಗ್ರಹವಾಗಿದ್ದು, ಅವುಗಳನ್ನು ಎಐಸಿಸಿಗೆ ಕಳುಹಿಸಲಾಗುವುದು ಎಂದು ಹೇಳಿದರು.









