ಹಿರಿಯರು ಅನುಸರಿಸಿದ್ದ ಜೀವನಶೈಲಿ ಇಂದಿನ ಪೀಳಿಗೆಗೆ ಮಾದರಿ: ರಾಜೀವ ಸಾಲಿಯಾನ್

ವೇಣೂರು: ಹಿಂದಿನ ಕೂಡು ಕುಟುಂಬಗಳ ಜೀವನದಲ್ಲಿ ನೆಮ್ಮದಿ, ಸೌಹಾರ್ದತೆ ಮತ್ತು ಆರೋಗ್ಯಕರ ಆಹಾರ ಪದ್ಧತಿ ಇತ್ತು. ಹಿರಿಯರು ಅನುಸರಿಸಿದ್ದ ಜೀವನಶೈಲಿ ಇಂದಿನ ಪೀಳಿಗೆಗೆ ಮಾದರಿಯಾಗಿದ್ದು, ಅದನ್ನು ಪರಿಚಯಿಸುವ ಕೆಲಸವನ್ನು ಬಳಂಜ ಸೇವಾ ಸಮಿತಿ ಮಾಡುತ್ತಿರುವುದು ಅಭಿನಂದನೀಯ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ರಾಜೀವ್ ಸಾಲಿಯಾನ್ ಹೇಳಿದರು.
ಅವರು ಆ 2ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
48 ವರ್ಷಗಳ ಹಿಂದೆ ಆರಂಭವಾದ ಬಳಂಜ ಸಂಘ ಹಿರಿಯರ ತ್ಯಾಗದಿಂದ ಬೆಳೆದು ಇಂದು ಸ್ವಂತ ಸಭಾಭವನ ಹೊಂದಿ ಇಡೀ ತಾಲೂಕಿಗೆ ಮಾದರಿಯಾಗಿದೆ. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಆದರ್ಶ ಸಂಘವಾಗಿ ಬೆಳೆದಿದೆ ಎಂದು ಹೇಳಿದರು.
ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆಟಿಡೊಂಜಿ ಕೂಟವು ಕೇವಲ ಸಾಂಪ್ರದಾಯಿಕ ಖಾದ್ಯಗಳ ಪ್ರದರ್ಶನವಲ್ಲ, ನಮ್ಮ ಸಂಸ್ಕೃತಿ, ಹಿರಿಯರ ಜೀವನ ಮೌಲ್ಯಗಳು ಹಾಗೂ ಗ್ರಾಮೀಣ ಬದುಕಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಿದೆ. ಸಮಾಜದ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಂಸ್ಕೃತಿ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಯುವಜನತೆ ಹಿರಿಯರ ಸಂಸ್ಕೃತಿ, ಆಚರಣೆ ಹಾಗೂ ಆಹಾರ ಪದ್ಧತಿಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಂಗಳೂರು ಎಸ್ಸಿಡಿಸಿಸಿ ಬ್ಯಾಂಕ್ನ ಶಾಖಾ ನಿರೀಕ್ಷಕಿ ಮಾಲಾ ಎಂ.ಕೆ. ಮಾತನಾಡಿ, ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ನೀಡುವುದು ಅಗತ್ಯವಾದರೂ, ಬದುಕಿನ ಕಷ್ಟ-ಸಂಕಷ್ಟಗಳ ಅನುಭವ ಹಾಗೂ ಹಿರಿಯರ ಮೌಲ್ಯಗಳನ್ನು ತಿಳಿಸುವುದು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಶಿಕ್ಷಕಿ ಸೌಮ್ಯ ಮಾತನಾಡಿ, ಉತ್ತಮ ಶಿಕ್ಷಣದ ಜೊತೆಗೆ ಗ್ರಾಮೀಣ ಜೀವನ ಪದ್ಧತಿ, ಸಂಸ್ಕೃತಿ ಹಾಗೂ ಪರಂಪರೆಯ ಅರಿವನ್ನು ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ, ಬಳಂಜ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಅವರು ವಿವಿಧ ವೈವಿಧ್ಯಮಯ ಸ್ಪರ್ಧೆಗೆ ಚಾಲನೆ ನೀಡಿ ಶುಭ ಕೋರಿದರು.
ವೇದಿಕೆಯಲ್ಲಿ ಸಂಘದ ಗೌರವ ಮಾಋಗದರ್ಶಕರಾದ ಕೆ. ವಸಂತ ಸಾಲಿಯಾನ್ ಕಾಪಿನಡ್ಕ,ಸಂಘದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ,ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಭಾರತಿ ಸಂತೋಷ್,ಕಾರ್ಯದರ್ಶಿ ಸಂಧ್ಯಾ ಹೆಚ್.ಡಿ,ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಶರತ್ ಅಂಚನ್,ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಸನ್ಮಾನ
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ದಿಯಾ ಎಂ. ಕೋಟ್ಯಾನ್ ಮತ್ತು ಧೃತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಆಟಿ ತಿಂಗಳ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ತಂದ ಮಹಿಳೆಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷೆ ಪುಷ್ಪಾ ಗೀರೀಶ್ ಪ್ರಾರ್ಥನೆಗೈದರು, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ವಿಶಾಲ ಜಗದೀಶ್ ನಿರೂಪಿಸಿದರು. ಅಧ್ಯಕ್ಷೆ ಭಾರತಿ ಸಂತೋಷ್ ವಂದಿಸಿದರು.ಸಂಘದ ನಿರ್ದೇಶಕರು ಮತ್ತು ಸದಸ್ಯರು ಸಹಕರಿಸಿದರು.



