ವೇಣೂರು: ವೇಣೂರು ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟು ಸಹಿತ ಸಂಚಾರಿ ಸೇತುವೆ ಬೇಸಿಗೆಕಾಲದಲ್ಲಿ ಕೇವಲ ನೀರಿಂಗಿಸುವುದಕ್ಕಷ್ಟೇ ಸೀಮಿತವಾಗಿದೆ. 2020-21ರಲ್ಲಿ ಮಂಜೂರುಗೊಂಡಿರುವ ಈ ಅಣೆಕಟ್ಟು ಸೇತುವೆ ಬರೋಬ್ಬರಿ ರೂ. 5.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು 15 ಅಡಿಯಷ್ಟು ಅಗಲ ಇರುವ ಈ ಸೇತುವೆಯಲ್ಲಿ ವಾಹನ ಸಂಚಾರವಿಲ್ಲ, ಕನಿಷ್ಠಪಕ್ಷ ಪಾದಾಚಾರಿಗಳಿಗೂ ಇದು ಯೋಗ್ಯವಾಗಿಲ್ಲ ಅನ್ನುವುದನ್ನು ನೀವು ನಂಬಲೇಬೇಕು.



ಎಲ್ಲಿದೆ ಈ ಸೇತುವೆ?
ವೇಣೂರು ಪೇಟೆ ಸನಿಹದಲ್ಲೇ ಸಂಪರ್ಕಕೊಂಡಿಯಾಗಿ ಈ ಸೇತುವೆ ಇದ್ದರೂ ಹೆಚ್ಚಿನ ಮಂದಿಗೆ ಇದರ ಗೋಚರವೇ ಇಲ್ಲ. ವೇಣೂರು ದೇವಸ್ಥಾನದ ಬಳಿಯ ಕಕ್ಕೆಕಲ್ಲು ಬಳಿಯಿಂದ ಪರಾರಿಬೈಲು ಸಂಪರ್ಕವಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ಭಯಾನಕ ದಾರಿ, ಸುರಕ್ಷತೆ ಇಲ್ಲ!
ಸಾರ್ವಜನಿಕರು ಮಾತ್ರವಲ್ಲದೆ ಶಾಲಾ ವಿದ್ಯಾರ್ಥಿಗಳು ಈ ಸೇತುವೆಯನ್ನು ಕಾಲುದಾರಿಯಾಗಿ ಬಳಕೆ ಮಾಡುತ್ತಿದ್ದಾರೆ. ನದಿಯ ಬದಿ, ಖಾಸಗಿ ತೋಟ, ಗದ್ದೆ ಮತ್ತು ತೋಡಿನ ಮಧ್ಯೆ ಚಲಿಸುವ ಈ ಕಾಲುದಾರಿ ಮಳೆಗಾಲದಲ್ಲಿ ಭಯಾನಕವಾಗಿದ್ದು, ಇಲ್ಲಿ ಅನಿವಾರ್ಯವಾಗಿ ತೆರಳುವ ಮಹಿಳೆಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಇತ್ತೀಚೆಗೆ ಮರ ಉರುಳಿಬಿದ್ದು ಇದ್ದ ಕಾಲುದಾರಿಯ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯರು ಇದೀಗ ಮತ್ತೊಂದು ಕಾಲುದಾರಿಯನ್ನು ಬಳಕೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಮುಳುಗುಸೇತುವೆಯಾಗಿ ಮಾರ್ಪಡುವ ಈ ಸೇತುವೆ ಕೆಲ ದಿನಗಳ ಹಿಂದೆ ಬಂದ ಪ್ರವಾಹ ನೀರಿಗೆ ಸೇತುವೆಯ ಮೇಲೆ ಮರದದಿಮ್ಮಿಗಳು, ಕಸಕಡ್ಡಿಗಳ ರಾಶಿ ಶೇಖರಣೆಯಾಗಿದ್ದು, ನಡೆದಾಡಲು ಕಷ್ಟವಾಗಿದೆ. ಕಬ್ಬಿಣದ ಗೇಟ್ಗಳನ್ನು ಇಡಲು ನಿರ್ಮಿಸಿರುವ ಕೋಣೆಯೂ ನಿಷ್ಪ್ರಯೋಜಕವಾಗಿದೆ. ಪರಿಣಾಮ ಕಬ್ಬಿಣದ ಗೇಟ್ಗಳು ಹೊರಗಡೆ ರಾಶಿಬಿದ್ದು ತುಕ್ಕು ಹಿಡಿಯುತ್ತಿದೆ.

ರೈತರಿಗೆ ಅನುಕೂಲ
ಮಹಾವೀರನಗರ-ಪರಾರಿಬೈಲು ಸಂಪರ್ಕಕ್ಕೆ ನಿರ್ಮಿಸಿರುವ ಈ ಕಿಂಡಿಅಣೆಕಟ್ಟು ಸೇತುವೆಯಲ್ಲಿ ಮಳೆಗಾಲದಲ್ಲಿ ಗೇಟ್ ಹಾಕಿ ನೀರು ನಿಲ್ಲುವಂತೆ ಮಾಡಲಾಗುತ್ತಿದ್ದು, ಪರಿಸರದ ರೈತರಿಗೆ ಅನುಕೂಲವಾಗಿದೆ. ಆದರೆ ಇಷ್ಟೊಂದು ಮೊತ್ತದ ಯೋಜನೆ ಕೇವಲ ಕೃಷಿನೀರು ಸಂಗ್ರಹಣೆಗೆ ಮಾತ್ರ ಸಾಧ್ಯವಾಗಿದ್ದು, ದುರಾದೃಷ್ಟಕರ ಅನ್ನುತ್ತಾರೆ ನಾಗರಿಕರು.
ಏನು ಮಾಡಬಹುದು?
1. ಸೇತುವೆಯ ಎರಡೂ ಬದಿಗಳಲ್ಲಿ ಸಂಪರ್ಕ ರಸ್ತೆ ನಿರ್ಮಿಸಬೇಕು. ಜಾಗ ಖಾಸಗಿಯಾಗಿದ್ದರೆ ಅವರೊಂದಿಗೆ ಜನಪ್ರತಿನಿಧಿಗಳು ಮಾತುಕತೆ ನಡೆಸಿ ಸಾರ್ವಜನಿಕ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಬಹುದು.
2. ಜಾಗವನ್ನು ಖರೀದಿ ಅಥವಾ ಕಾನೂನಾತ್ಮಕ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾ ಅನ್ನುವುದರ ಬಗ್ಗೆ ಚರ್ಚಿಸಬೇಕು. ಒಂದು ಸಂಪರ್ಕ ರಸ್ತೆ ಆಯಿತು ಎಂದಾದರೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ಗುರುತಿಸಿಕೊಂಡಿರುವ ವೇಣೂರಿಗೆ ಮತ್ತೊಂದು ಬೃಹತ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಬಲ್ಲದು.
ಸಂಪರ್ಕ ಸೇತುವೆಯಾದರೆ ಅನುಕೂಲವೇನು?
ಈ ಸಂಪರ್ಕ ಸೇತುವೆ ಪೂರ್ಣ ಸಂಚಾರಕ್ಕೆ ಯೋಗ್ಯವಾದರೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ವೇಣೂರಿನಿಂದ ಮೂಡುಕೋಡಿ, ನಾರಾವಿ ಸಂಪರ್ಕ ಸುಲಭವಾಗುತ್ತದೆ. ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಭಗವಾನ್ ಬಾಹುಬಲಿ ಮೂರ್ತಿ ಮತ್ತು ಅಜಿಲ ಸೀಮೆಯ ಮಹಾಲಿಂಗೇಶ್ವರ ದೇವಸ್ಥಾನ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಅಣೆಕಟ್ಟುವಿನಲ್ಲಿ ಬೇಸಿಗೆಕಾಲದಲ್ಲಿ ನೀರು ಶೇಖರಣೆಯಾದಾಗ ಈ ಸೇತುವೆಯ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸ್ವಾದಿಸಬಹುದು.
ಸಂಪರ್ಕ ರಸ್ತೆಗಳಿಲ್ಲ!; ನೀರಿಂಗಿಸಲು 5.70 ಕೋಟಿ ಬೇಕಿತ್ತಾ?
ವೇಣೂರು ಮಹಾವೀರ ನಗರದಿಂದ ಮೂಡುಕೋಡಿ ಗ್ರಾಮದ ಪರಾರಿಬೈಲು ಸಂಪರ್ಕವಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಬರೋಬ್ಬರಿ ರೂ. 5.70 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಿರ್ಮಿಸಲಾಗಿದೆ. ಸುಮಾರು 15 ಅಡಿ ಅಗಲವಿರುವ ಈ ಸೇತುವೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲವಾಗಿದೆ, ಕಾರಣ ಇದಕ್ಕೆ ಸಂಪರ್ಕ ರಸ್ತೆಗಳಿಲ್ಲ! ಸೇತುವೆಯ ಅಕ್ಕಪಕ್ಕದ ಎರಡೂ ಬದಿಗಳಲ್ಲಿ ಖಾಸಗಿಯವರ ಜಾಗ, ತೋಟವಿದ್ದು, ಇದರಿಂದ ಬಹುದೊಡ್ಡ ಯೋಜನೆಯೊಂದು ಸಾರ್ವಜನಿಕರ ಸಂಚಾರಕ್ಕೆ ಉಪಯೋಗಕ್ಕೆ ಸಿಗದೆ ಕೇವಲ ನೀರಿಂಗಿಸುವುದಕ್ಕಷ್ಟೇ ಸೀಮಿತ ಅನ್ನುವಂತಾಗಿದೆ. ವೇಣೂರು ಮಹಾವೀರ ನಗರದಿಂದ ಮೂಡುಕೋಡಿಗೆ ತೆರಳಲು ಕೇವಲ ಒಂದು-ಒಂದೂವರೆ ಕಿ.ಮೀ. ಸುಲಭ ಸಂಪರ್ಕ ಸೇತುವೆ ಇದಾಗಿದೆ. ಆದರೆ ಸೇತುವೆ ನಿಷ್ಪ್ರಯೋಜಕದಿಂದ ಸಾರ್ವಜನಿಕರು ವಾಹನದಲ್ಲಿ ಏಳೆಂಟು ಕಿ.ಮೀ. ಚಲಿಸಿ ಹೋಗಬೇಕಿದೆ.



