ವೇಣೂರು: ವೇಣೂರು ಮುಖ್ಯಪೇಟೆಯ ಎಪಿಯಂಸಿ ಕಟ್ಟಡದಲ್ಲಿ ಪ್ರತೀ ಮಂಗಳವಾರ ನಡೆಯುವ ವಾರದ ಸಂತೆ ಇದೀಗ ಅಪಾಯದ ಗೂಡಾಗಿ ಪರಿಣಮಿಸಿದೆ.
ಹೌದು, ಹೆದ್ದಾರಿ ಸಂಚಾರದ ಸುರಕ್ಷಿತ ಅಂತರವನ್ನೂ ಬಿಡದೆ ವ್ಯಾಪಾರಸ್ಥರು ವಾಹನ ನಿಲ್ಲಿಸಿ ವ್ಯಾಪಾರ ನಡೆಸುತ್ತಿದ್ದು, ಅಪಾಯ ತಂದೊಡ್ಡಿದೆ. ಇತ್ತೀಚೆಗೆ ವೇಣೂರು ಮುಖ್ಯಪೇಟೆಯಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ವ್ಯಕ್ತಿಯೊಬ್ಬರಿಗೆ ಟೂರಿಸ್ಟ್ ವಾಹನ ಡಿಕ್ಕಿಯೊಡೆದು ವ್ಯಕ್ತಿಯೊಬ್ಬರು ಅಸುನೀಗಿರುವ ಘಟನೆ ನಡೆದಿದ್ದು, ಇಲ್ಲಿಯೂ ಗ್ರಾಹಕರ ಸುರಕ್ಷತೆ ಮರಿಚಿಕೆಯಾಗಿದೆ.

ಇನ್ನು ಮಾರ್ಕೆಟಿಗೆ ಬರುವ ಗ್ರಾಹಕರು ಸಂತೆ ಬದಿಯ ಹೆದ್ದಾರಿಯಲ್ಲೇ ಪಾರ್ಕಿಂಗ್ ಮಾಡುತ್ತಿದ್ದು, ಅಪಾಯ ತಂದೊಡ್ಡಿದೆ. ಅಲ್ಲದೆ ಸಮೀಪದ ಎಟಿಎಂ ಬಳಿ ಜಾಗವಿದ್ದರೂ ಕಮರ್ಷಿಯಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸಂತೆಗೆ ಬರುವ ಗ್ರಾಹಕರು ವಾಹನಗಳನ್ನು ಪಾರ್ಕ್ ಮಾಡಿ ಹೋಗುತ್ತಿರುವುದರಿಂದ ಇಲ್ಲಿಯ ಅಂಗಡಿ ಮಾಲಕರಿಗೂ ತೊಂದರೆ ಆಗುತ್ತಿದೆ ಅನ್ನುವ ಮಾತು ಕೇಳಿಬಂದಿದೆ.
ಶ್ರೀರಾಮ ನಗರದಲ್ಲಿದ್ದ ಸಂತೆಯನ್ನು ಇಲ್ಲಿಗೆ ಸ್ಥಳಾಂತರಿಸಿ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಸ್ಥಳೀಯಾಡಳಿತದ ನಿರ್ಧಾರಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಇಲ್ಲಿ ಸಾಕಷ್ಟು ಜಾಗವಿದ್ದರೂ ಅವ್ಯವಸ್ಥೆಯ ಕೂಡಾಗಿ ಮಾರ್ಪಟ್ಟಿದ್ದು, ವ್ಯವಸ್ಥಿತವಾಗಿ ನಿರ್ವಹಿಸಲು ಪಂಚಾಯತ್ ಮಾರ್ಗದರ್ಶನ ನೀಡಬೇಕಿದೆ.
ಸಂತೆಯುದ್ದಕ್ಕೂ ಮಳೆಗಾಲದಲ್ಲಿ ಕೆಸರು ಆಗುತ್ತಿದ್ದು, ಜನ ಓಡಾಟ ಮಾಡುವ ದಾರಿಗೆ ಜಲ್ಲಿಕಲ್ಲು ಹಾಕುವಂತೆ ಗ್ರಾಹಕರು ‘ನ್ಯೂಸ್ 19 ಕನ್ನಡ’ ಮಾಧ್ಯಮದ ಮೂಲಕ ಸ್ಥಳೀಯಾಡಳಿತವನ್ನು ಕೇಳಿಕೊಂಡಿದ್ದಾರೆ.



