ಮಂಗಳೂರು: ಇದು ಮುಂಗಾರು ಸಮಯ ಆಗಿದ್ದರೂ ಸಹ ರಾಜ್ಯದೆಲ್ಲೆಡೆ ಮಳೆ ಕ್ಷೀಣಿಸಿದೆ. ಹಾಗೆಯೇ ಮುಂದಿನ ಕೆಲವು ದಿನಗಳವರೆಗೆ ಬಹುತೇಕ ಜಿಲ್ಲೆಗಳಿಗೆ ಯಾವುದೇ ಮಳೆಯ ಮುನ್ಸೂಚನೆ ಇರುವುದಿಲ್ಲ. ಬದಲಿಗೆ ಬಿಸಿಲಿನ ಪ್ರಮಾಣ ಹೆಚ್ಚಾಗಲಿದೆ. ಕೆಲವೆಡೆ ಮಾತ್ರ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಆತಂಕಕಾರಿ ಮುನ್ಸೂಚನೆ ನೀಡಿದೆ.

ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಮತ್ತು ಇವತ್ತು ಕೂಡಾ ಬೆಳಗ್ಗೆಯೇ ಸೂರ್ಯ ದರ್ಶನ ಕೊಟ್ಟಿದ್ದಾನೆ. ನಗರದಲ್ಲಿ ಇಡೀ ದಿನ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಮಳೆಯೇ ಇಲ್ಲದಂತಾಗಿದೆ. ತಾಪಮಾನ ಪ್ರಮಾಣ ಮಾತ್ರ ಏರಿಕೆಯಾಗುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.
ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸಂದೇಶ!
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿತ್ತು. ಆದರೆ ಒಂದು ವಾರದಿಂದ ಕೆಲವೆಡೆ ಅಲ್ಲಲ್ಲಿ ಮಾತ್ರ ತುಂತುರು ಮಳೆಯಾಗುತ್ತಿದೆ. ಮುಂದಿನ ಕೆಲ ದಿನಗಳ ಕಾಲ ಇದು ಕೂಡ ಇರುವುದಿಲ್ಲ, ಒಳಹವೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿತ್ತು. ಆದರೆ ಇದೀಗ ಇಲ್ಲಿನ ಬಹುತೇಕ ಭಾಗಗಳಲ್ಲಿ ಕೆಲವು ದಿನಗಳವರೆಗೆ ಯಾವುದೇ ಮಳೆಯ ಮುನ್ಸೂಚನೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಕೆಲವೆಡೆ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ಇದೀಗ ಮತ್ತೆ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಡ್ಯಾಂಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲಿದೆ. ಇದರಿಂದ ಜನರಲ್ಲಿ ಆತಂಕ ಶುರುವಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಮತ್ತೆ ಕೈಕೊಟ್ಟಿದ್ದು, ಕೃಷಿಕರು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಲೇ ಹೀಗೆ ಆದ್ರೆ ಇನ್ನೂ ಮುಂಗಾರು ಅವಧಿ ಮುಗಿದ ಮೇಲೆ ಇನ್ನೇನು ಗತಿ ಕಾದಿದೆಯೋ ಎನ್ನುವ ಆತಂಕದಲ್ಲಿದ್ದಾರೆ. ಈ ನಡುವೆಯೇ ಹವಾಮಾನ ಇಲಾಖೆ ಆತಂಕದ ವಿಚಾರ ಹೊರಹಾಕಿದ್ದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇಷ್ಟೊತ್ತಿಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಬೇಕಿತ್ತು. ಆದರೆ ಈ ವಾಡಿಕೆಯಷ್ಟು ಕೂಡ ಮಳೆ ಸುರಿಯುತ್ತಿಲ್ಲ. ಇದು ಚಿಂತೆಗೆ ಒಳಗಾಗುವಂತೆ ಮಾಡಿದೆ. ಒಟ್ಟಿನಲ್ಲಿ ಹೇಳುವುದಾದರೆ ಮಳೆರಾಯನ ಆರ್ಭಟ ಮತ್ತೆ ಯಾವಾಗ ಶುರುವಾಗಲಿದೆಯೋ ಎಂದು ರಾಜ್ಯದ ರೈತರು ಹಾಗೂ ಜನ ಮೋಡದ ಕಡೆ ಮುಖ ಮಾಡಿ ಕಾದು ಕುಳಿತಿದ್ದಾರೆ.



