ಬೆಂಗಳೂರು, ಸೆ. 22: ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಅಲ್ಲದೆ ಭೌತಿಕ ಸರ್ವೇಗೆ ಒಂದು ವರ್ಷದ ಕಾಲಾವಕಾಶ ಕೊಡಬೇಕು. ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪುವುದಿಲ್ಲ ಮತ್ತು ಅಧಿಸೂಚನೆಯನ್ನು ಮರು ಪರಿಶೀಲಿಸಬೇಕೆಂದು ವಿಧಾನಸಭೆಯಲ್ಲಿ ಅವರು ನಿರ್ಣಯ ಮಂಡಿಸಿದ್ದಾರೆ.


ಕರ್ನಾಟಕ ರಾಜ್ಯ ಸರ್ಕಾರದ ನಿರ್ಣಯಗಳೇನು?
-
- ಯಥಾವತ್ತಾಗಿ 7ನೇ ಅಧಿಸೂಚನೆ ಒಪ್ಪಿರುವುದಿಲ್ಲ, ವರದಿಯ ನ್ಯೂನ್ಯತೆಗಳನ್ನು ಸರಿಪಡಿಸಬೇಕು
- ಇಎಸ್ಎ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶ, ಇತರೆ ಅರಣ್ಯಪ್ರದೇಶ ಮಾತ್ರ ಸೇರಿಸಬೇಕು. ಕೃಷಿ ಭೂಮಿ, ತೋಟ, ಜನವಸತಿ ಭೂಮಿ ಸೇರಿಸಬಾರದು
- ಬಗರ ಹುಕುಂ, ಅರಣ್ಯ ಹಕ್ಕು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ, ನ್ಯಾಯಾಂಗ ಪ್ರಕರಣ ಪರಿಗಣಿಸಬೇಕು, ಭೌತಿಕವಾಗಿ ಸರ್ವೇ ಮಾಡಿ ಗುರುತಿಸಬೇಕು
- ರಾಜ್ಯ ಸರ್ಕಾರಿಂದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳು, ರೈತ ಪ್ರತಿನಿಧಿ, ಕೈಗಾರಿಕಾ ಉದ್ಯಮ ಪ್ರತಿನಿಧಿ, ವಿಷಯ ಪರಿಣಿತರು, ಶೈಕ್ಷಣಿಕ ತಜ್ಞರು, ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚನೆ
- ಭೌತಿಕ ಸರ್ವೇ ಸೇರಿದಂತೆ ಕಸ್ತೂರಿ ರಂಗನ್ ವರದಿಯ ನ್ಯೂನ್ಯತೆ ಸರಿಪಡಿಸಲು ಒಂದು ವರ್ಷದ ಕಾಲಾವಕಾಶಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿಗೆ ನಿರ್ಧಾರ
- ಈ ಅವಧಿಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಬಾರದು ಮತ್ತು ರಾಜ್ಯ ಸರ್ಕಾರದ ವಿಷಯದ ಬಗ್ಗೆ ಚರ್ಚೆ ನಡೆಸಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕು
- ರಾಜ್ಯಮಟ್ಟದ ಸಮಿತಿಯ ಸಹಾಯಕ್ಕೆ ಗ್ರಾಮ ಮಟ್ಟದಲ್ಲೂ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ
- ರಾಜ್ಯ ಸರ್ಕಾರದ ನಿರ್ಣಯಕ್ಕೆ ವಿಪಕ್ಷದ ಬೆಂಬಲ
- ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರದ ನಿರ್ಣಯಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ನಾವು ಯಾವುದೇ ರಾಜಕಾರಣ ಬೆರೆಸುವುದಿಲ್ಲ. ನಾವೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಕೊಡುತ್ತೇವೆ ಎಂದು ವಿಧಾನಸಭೆಯಲ್ಲಿಯೇ ಅವರು ಹೇಳಿದ್ದಾರೆ.



