ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರವಾಹದಿಂದ ದಿಢೀರ್ ಮೇಘಸ್ಫೋಟ ಉಂಟಾಗಿದೆ. ಪ್ರವಾಹದ ನೀರಿನಲ್ಲಿ 200ಕ್ಕೂ ಹೆಚ್ಚು ವಾಹನಗಳು ಕೊಚ್ಚಿಹೋಗಿವೆ. ರಜೌರಿ ಹಾಗೂ ಕಿಸ್ತ್ವಾರದಲ್ಲಿ ಪ್ರವಾಹದಿಂದ ಮೇಘಸ್ಫೋಟದ ಬಳಿಕ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರವಾಹದಲ್ಲಿ ಸಿಲುಕಿ ಇದುವರೆಗೂ 11 ಜನ ಸಾವನ್ನಪ್ಪಿದ್ದಾರೆ. ಉತ್ತರ ಕಾಶ್ಮೀರದ ಬಾಂಡಿಪೋರಾ ಜಿಲ್ಲೆಯ ಗುರೇಜ್ ವಲಯದ ದಾವರ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಭೀಕರ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಭಾರಿ ಪ್ರವಾಹ ಉಂಟಾಗಿದ್ದು, ಜಾನುವಾರು ಕೊಟ್ಟಿಗೆಯೊಂದು ಧ್ವಂಸಗೊಂಡಿದೆ. ರಸ್ತೆಯ ಒಂದು ಭಾಗ ಕೊಚ್ಚಿಹೋಗಿದೆ.

ಪೂಂಚ್, ಜುಲೈ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು, ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ ಒಟ್ಟು 11 ಜನರು ಬಲಿಯಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಹುಡುಕಾಟ ಮತ್ತು ಸಿಲುಕಿರುವ ನಿವಾಸಿಗಳ ರಕ್ಷಣೆಗಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಮತ್ತು ಮನೆಗಳು ಕುಸಿದು ಬಿದ್ದಿದೆ. ಪೂಂಚ್ನ ಸುರನ್ಕೋಟ್ ತಹಸಿಲ್ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಇಲ್ಲಿಯೇ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



