ನವದೆಹಲಿ, ಜು. 21: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ಸೋಮವಾರ ನಡೆಸಲಾದ ಯುವ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದ ಬಳಿ ನಡೆಯುತ್ತಿದ್ದ ವಿರೋಧ ಪಕ್ಷಗಳ ಬೃಹತ್ ಧರಣಿ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಇಂದು ಸಂಜೆ ವೇಳೆ ಅಂತ್ಯಗೊಳಿಸಿದ್ದಾರೆ. ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗೆ ಧರಣಿ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಆದರೆ, ಇಂದು ಸಂಜೆ ಸುಮಾರು 6.40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ಜೊತೆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಪ್ರತಿಭಟನಾನಿರತರನ್ನು ತೆರವುಗೊಳಿಸಲು ಆರಂಭಿಸಿದರು. ಆದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಕುಳಿತು, ತಮ್ಮ ಬೇಡಿಕೆಗಳು ಈಡೇರುವವರೆಗೆ ಆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಕೊನೆಗೆ ಅವರನ್ನು 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸುತ್ತುವರಿದು ಬಲವಂತವಾಗಿ ಸ್ಥಳದಿಂದ ಎಬ್ಬಿಸಿ, ಹೊತ್ತುಕೊಂಡೇ ಬಸ್ನಲ್ಲಿ ಹತ್ತಿಸಿಕೊಂಡು ಕರೆದುಕೊಂಡು ಹೋದರು. ಪೋಲಿಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಕೂಟದ ನಾಯಕರು, “ಸರ್ಕಾರವು ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳನ್ನು ಅನುಸರಿಸುತ್ತಿದೆ” ಎಂದು ಆರೋಪಿಸಿದ್ದಾರೆ.



