ನವದೆಹಲಿ, ಸೆ. 4: ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ 17 ದಿನಗಳ ಬೃಹತ್ ಯುದ್ಧ ತಾಲೀಮು ನಡೆಸಲು ಸಜ್ಜಾಗಿದ್ದು, ಈ ಸಂಬಂಧ ಅಧಿಕೃತ ನೋಟಮ್ ಜಾರಿಗೊಳಿಸಿದೆ. ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಈ ಭಾರಿ ಮಿಲಿಟರಿ ಕವಾಯತಿನಿಂದ ಗಡಿಯಲ್ಲಿ ಆತಂಕಗೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದಿದ್ದು, ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ.


ಕಾಯ್ದಿರಿಸಿದ ವಲಯಗಳು: ಜೈಸಲ್ಮೇರ್, ಬಾರ್ಮರ್, ಫಲೋಡಿ, ಜೋಧ್ಪುರ ಮತ್ತು ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ಮೀಸಲಿಡಲಾಗಿದೆ.
40 ಸಾವಿರ ಅಡಿ ಎತ್ತರದಲ್ಲಿ ಹಾರಾಟ: ಸುಮಾರು 40 ಸಾವಿರ ಅಡಿ ಎತ್ತರದವರೆಗೆ ಈ ವಲಯದಲ್ಲಿ ಯುದ್ಧ ವಿಮಾನಗಳ ಚಲನವಲನಗಳಿಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ.



