ಮಂಗಳೂರು: ಶಿಕ್ಷಣ ಇಲಾಖೆಯ ನೇರ ನೇಮಕವಾಗುವ ಹಾಗೂ ಬಡ್ತಿ ಪಡೆಯುವ ಉಪನ್ಯಾಸಕರು 9 ಮತ್ತು 10 ನೇ ತರಗತಿಗಳಿಗೆ ಬೋಧಿಸಬೇಕು ಎಂಬ, ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನೇಮಕಾತಿ ನಿಯಮಗಳು, 2013 ಕ್ಕೆ 2026ರ ಕರಡು ತಿದ್ದುಪಡಿಯ ಪ್ರಸ್ತಾವನೆ ಅಧಿಸೂಚನೆ ಸಂಖ್ಯೆ: EP 9 DPI 2026, ದಿನಾಂಕ: 18-06- 2026 ರಂತೆ ಸರ್ಕಾರವು ಕರಡು ತಿದ್ದುಪಡಿಯನ್ನು ಪ್ರಕಟಿಸಿದ ಕ್ರಮವನ್ನು ಕರ್ನಾಟಕ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ(ರಿ) ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ(ರಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ತೀವ್ರವಾಗಿ ಖಂಡಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ.ನವೀನ್ ಶೆಟ್ಟಿ ಕೆ. ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕರ್ನಾಟಕ ರಾಜ್ಯದಲ್ಲಿ SEP ಯು ಜಾರಿಯ ಹಂತದಲ್ಲಿ ಇರುವ ಸಂದರ್ಭದಲ್ಲಿ ಈ ರೀತಿಯ ನಿಯಮಗಳ ತುರ್ತು ಬದಲಾವಣೆಯ ಅಗತ್ಯವಿಲ್ಲ ಹಾಗೂ ನಿಯಮ ರೂಪಿಸಲು ಮುಂದಾಗುವ ಮುನ್ನ, ಪದವಿ ಪೂರ್ವ ಮತ್ತು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಶೈಕ್ಷಣಿಕ ಮನೋವಿಜ್ಞಾನದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಮತ್ತು ಬೋಧಕ ವರ್ಗದ ಜಂಟಿ ಸಮಿತಿಯೊಂದನ್ನು ರಚಿಸಿ, ಎದುರಾಗುವ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದು ಸರಿಯಾದ ಕ್ರಮವಾಗುತ್ತದೆ ಎಂದವರು ಹೇಳಿದರು.
ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಅಸಾಧ್ಯ
ಬಳಿಕ ಮಾತಾಡಿದ ಸಂಘದ ಜಂಟಿ ಕಾರ್ಯದರ್ಶಿ ವಿಠಲ್ ಅವರು, “ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ನೇಮಕಾತಿ ವಿಧಾನ, ಪಠ್ಯಕ್ರಮ ಮತ್ತು ಬೋಧನಾ ಕ್ರಮದಲ್ಲಿ ಏಕರೂಪತೆಯನ್ನು ಖಾತರಿಪಡಿಸಲು ಪ್ರಮುಖವಾಗಿ ಕ್ರಮ ಕೈಗೊಳ್ಳಬೇಕು. ಶಿಕ್ಷಣ ವ್ಯವಸ್ಥೆಯ ಸಂರಚನೆಯನ್ನೇ ಪುನರ್ವಿನ್ಯಾಸ ಮಾಡಿಕೊಳ್ಳದೆ, ಸೀಮಿತವಾದ ಕೆಲವೇ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವ ನಿಯಮ ರೂಪಿಸುವುದು ಏಕರೂಪದ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿದೆ. ಶಿಕ್ಷಣದಲ್ಲಿ ಬದಲಾವಣೆ/ ಸುಧಾರಣೆ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ಅಥವಾ ಶಿಕ್ಷಣದ ಮೂಲದಿಂದಲೇ ಹಂತ ಹಂತವಾಗಿ ಯಾವುದೇ ನಿಯಮಗಳನ್ನು ಜಾರಿಗೆ ತರುವುದು ಉತ್ತಮ ಮತ್ತು ಅಧಿಕಾರಿ ವರ್ಗಗಳ ಉತ್ತರದಾಯಿತ್ವದ ಬಗ್ಗೆ ನಿರ್ಧಾರವಾಗಬೇಕು. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಎರಡೂ ಕಡೆ ಪಬ್ಲಿಕ್ ಪರೀಕ್ಷೆಗಳಿಗೆ ಓರ್ವ ಶಿಕ್ಷಕ ವಿದ್ಯಾರ್ಥಿಗಳನ್ನು ತಯಾರಿಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಈ ಎರಡೂ ತರಗತಿಗಳ ಬೋಧನಾ ಕ್ರಮ (ಟೀಚಿಂಗ್ ಮೆಥಡಾಲಜಿ) ಬೇರೆ ಬೇರೆ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಅಸಾಧ್ಯವಾಗುತ್ತದೆ ಎಂದರು.
ಪ್ರೌಢಶಾಲೆಯಿಂದ ಅರ್ಹತಾ ಪರೀಕ್ಷೆ ನಡೆಸಿ, ಪದವಿ ಪೂರ್ವ ಉಪನ್ಯಾಸಕರಾಗಿ ಬಡ್ತಿ ನೀಡಲು ನಿರ್ಧರಿಸಿ ಪರೀಕ್ಷೆ ನಡೆಸಲಾಗಿದೆ. ಬಡ್ತಿ ನೀಡಿದ ನಂತರ ಪುನಃ 9 ಮತ್ತು 10 ನೇ ತರಗತಿಗೆ ಬೋಧಿಸಲು ಒತ್ತಾಯಿಸಿದರೆ, ಬಡ್ತಿಯ ಉದ್ದೇಶವೇ ನಿರರ್ಥಕವಾಗುತ್ತದೆ. ಬಡ್ತಿ ಎನ್ನುವುದು ಅಧಿಕ ಜವಾಬ್ದಾರಿ ಹಾಗೂ ಉನ್ನತ ಮಟ್ಟದ ಬೋಧನೆಗೆ ನೀಡುವ ಮನ್ನಣೆಯಾಗಿದೆ. ಆದ್ದರಿಂದ, ಬಡ್ತಿ ಪಡೆದ ಉಪನ್ಯಾಸಕರನ್ನು ಪದವಿ ಪೂರ್ವ ತರಗತಿಗಳಿಗೆ ಮಾತ್ರ ನಿಯೋಜಿಸಿ, ಬಡ್ತಿಯ ಗೌರವವನ್ನು ಕಾಪಾಡಬೇಕು. ಕಾರ್ಯಭಾರವನ್ನು ಸರಿದೂಗಿಸುವ ಕಾರಣವನ್ನು ನೀಡಿ ಉಪನ್ಯಾಸಕರನ್ನು ವಾರದಲ್ಲಿ ಮರು ದಿನ ಮತ್ತೊಂದು ಕಾಲೇಜಿಗೆ ನಿಯೋಜಿಸುವುದರಿಂದ ಮೂಲ ಕಾಲೇಜು ಮತ್ತು ನಿಯೋಜಿಸಿದ ಕಾಲೇಜಿನ ಶೈಕ್ಷಣಿಕ ವಾತಾವರಣ ಹದೆಗೆಡುವುದರ ಜೊತೆಗೆ ವಿದ್ಯಾರ್ಥಿಗಳು ವಾರದಲ್ಲಿ ಕೇಳಬೇಕಾದ ವಿಷಯವಾರು ಪಾಠವನ್ನು ಮೂರು ದಿನಗಳಲ್ಲಿ ಕೇಳಬೇಕಾದ ಒತ್ತಡಕ್ಕೆ ಒಳಗಾಗಿ ವಿಷಯದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ. ಈ ಉಪಕ್ರಮದಿಂದಾಗಿ ಫಲಿತಾಂಶ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಉಪನ್ಯಾಸಕರ ಕಾರ್ಯಭಾರವನ್ನೇ ಪ್ರಧಾನ ಮಾನದಂಡವಾಗಿರಿಸಿಕೊಂಡು ನಿಯಮ ರೂಪಿಸುವ ಬದಲು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡು, ಶಿಕ್ಷಣವನ್ನು ವಿದ್ಯಾರ್ಥಿಸ್ನೇಹಿಯನ್ನಾಗಿಸಬೇಕು. ವಿದ್ಯಾರ್ಥಿಕೇಂದ್ರಿತ ಶಿಕ್ಷಣವೇ ಅಂತಿಮ ಗುರಿಯಾಗಬೇಕು.
ಆದ್ದರಿಂದ ಸರಕಾರವು ತೆಗೆದುಕೊಳ್ಳಲು ಮುಂದಾದ ಪ್ರಸ್ತಾವನೆಯ ಜಾರಿ ಆತುರದ ನಿರ್ಧಾರವಾಗಬಾರದು ಹಾಗೂ ತಜ್ಞರ ಸಮಿತಿಯಿಂದ ಸಾಧಕ ಬಾದಕಗಳ ವರದಿ ಬಂದ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕರ್ನಾಟಕದ ಪ ಪೂ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕ ಸಮುದಾಯ ಈ ಪ್ರಸ್ತಾವಿತ ತಿದ್ದುಪಡಿಯ ವಿರುದ್ಧ ಸಂಘಟಿತ ಹೋರಾಟವನ್ನು ಪ್ರಜಾಸತ್ತಾತ್ಮಕವಾಗಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಹರಿಪ್ರಕಾಶ್, ಶೀನಪ್ಪ, ಸಚಿತ್ ಸುವರ್ಣ, ಸೀಮಾ ಮತ್ತಿತರರು ಉಪಸ್ಥಿತರಿದ್ದರು.



