ಬ್ರಾಟಿಸ್ಲಾವಾ, ಜೂ. 16: ಸ್ಲೋವಾಕಿಯಾ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಪ್ರಶಸ್ತಿ ನೀಡಿ ಗೌರವಿಸಿದೆ.
‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಎಂಬುದು ಸ್ಲೋವಾಕಿಯಾ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನ್ ಅವರು ಪ್ರಧಾನಿ ಮೋದಿಯವರಿಗೆ ಪ್ರದಾನ ಮಾಡಿದ್ದಾರೆ.ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ, ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಪ್ರಶಸ್ತಿ ಸ್ವೀಕರಿಸಿದ ನಂತರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, “ಸ್ಲೋವಾಕಿಯಾದ ಸರ್ಕಾರ ಮತ್ತು ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವ. ಇದು ಭಾರತದ 1.4 ಶತಕೋಟಿ (140 ಕೋಟಿ) ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ” ಎಂದು ತಿಳಿಸಿದ್ದಾರೆ.



