ಗರ್ಡಾಡಿಯಲ್ಲಿ ಮದ್ಯವರ್ಜನ ಶಿಬಿರ, 40 ಕಡೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ನಿರ್ಧಾರ
ಬೆಳ್ತಂಗಡಿ; ತಾಲೂಕು ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ವಿಶೇಷ ಸಭೆಯು ಎಸ್.ಡಿ.ಎಂ ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಏ.21 ರಂದು ಜರುಗಿತು.
ಸಭಾಧ್ಯಕ್ಷತೆಯನ್ನು ತಾ. ಸಮಿತಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.
ವ್ಯಸನಮುಕ್ತ ಸಮಾಜ ನಿರ್ಮಾಣದ ಸವಾಲಿನ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ವೇದಿಕೆಯ ಕಾರ್ಯಕ್ರಮಗಳಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ವರದಿ ಸಾಲಿನಲ್ಲಿ ತಾಲೂಕಿನ ಗರ್ಡಾಡಿಯಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿ ಮತ್ತು ಯುವ ಸಮೂಹವನ್ನು ಗುರಿಯಾಗಿಸಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಒಟ್ಟು 40 ಕಡೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಸಂಯೋಜಿಸುವುದೆಂದು ತೀರ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ ಯನ್ನೂ ನಡೆಸಲು ನಿರ್ಧರಿಸಲಾಯಿತು.
ವಲಯಕ್ಕೊಂದು ನವಜೀವನ ಸಮಿತಿ ರಚನೆಯ ಗುರಿ, ನವಜೀವಮೋತ್ಸವ ಕಾರ್ಯಕ್ರಮ, ಅಕ್ಟೋಬರ್ 2 ಗಾಂಧಿ ಜಯಂತಿ ಆಚರಣೆ ಸೇರಿದಂತೆ ಜನಜಾಗೃತಿ ವೇದಿಕೆಯ ವಾರ್ಷಿಕ ಕ್ರಿಯಾಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಜಿಲ್ಲಾ ನಿರ್ದೇಶಕ ದಿನೇಶ್ ಡಿ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷರುಗಳಾದ ಡಿ.ಎ ರಹಿಮಾನ್, ಕಿಶೋರ್ ಹೆಗ್ಡೆ, ಪಿ.ಕೆ ರಾಜು ಪೂಜಾರಿ, ಜನಜಾಗೃತಿ ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಎಲ್ಲಾ ವಲಯಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಕ್ರಿಯಾಯೋಜನೆ ಮಂಡಿಸಿ ಸಭೆಯ ಸಂಯೋಜನೆ ಮಾಡಿದರು.
ಇದೇ ವೇಳೆ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಅವರ ಆಯ್ಕೆಯನ್ನು ಪ್ರಕಟಿಸಲಾಯಿತು. ಇದುವರೆಗೆ ತಾಲೂಕು ಅಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ಧಾರಿ ನಿರ್ವಹಿಸಿದ ಕಾಸಿಂ ಮಲ್ಲಿಗೆಮನೆ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಯೋಜನೆಯ ಬೆಳ್ತಂಗಡಿ ಯೋಜನಾಧಿಕಾರಿ ಯಶೋಧರ ಕೆ ಸ್ವಾಗತಿಸಿದರು. ಜನಜಾಗೃತಿ ಕರಾವಳಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ
ಗಣೇಶ್ ಆಚಾರ್ಯ ನಿರೂಪಿಸಿ ವಂದಿಸಿದರು.
ತಾಲೂಕು ಸಂಘಟನಾ ಅಧ್ಯಕ್ಷರಾಗಿ ಗಿರೀಶ್ ಕೆ.ಎಸ್ ವೇಣೂರು ಅವಿರೋಧ ಆಯ್ಕೆ
ಜನಜಾಗೃತಿ ವೇದಿಕೆಯ ಆರಂಭಿಕ ಕಾಲಘಟ್ಟದಿಂದಲೇ ಸದಸ್ಯರಾಗಿ ಸೇವೆ ಸಲ್ಲಿಸಿರುವ ಹಿರಿಯ ಅನುಭವಿ ಕಾರ್ಯಕರ್ತರಾಗಿರುವ ಗಿರೀಶ್ ಅವರು ವೇಣೂರಿನಲ್ಲಿ
ಸೀತಾ ಶ್ರೀರಾಮ ಪ್ರಿಂಟರ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ, ತಾಲೂಕು ಸಮಿತಿ ಸದಸ್ಯರಾಗಿ, ಕಳೆದ ಸಾಲಿನ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಲಯನ್ಸ್ ಕ್ಲಬ್ ವೇಣೂರು ಇಲ್ಲಿ ಕಳೆದ 20 ವರ್ಷಗಳಿಂದ ಸೇವೆ, ಯುವ ಸೇವಾ ಸಂಗಮ ಇದರ ಟ್ರಸ್ಟಿಯಾಗಿ, ಯೂತ್ ಕ್ಲಬ್ ವೇಣೂರು ಗೌರವಾಧ್ಯಕ್ಷರಾಗಿ, ಗಣೇಶೋತ್ಸವ ಸಮಿತಿಯ ವಿವಿಧ ಜವಾಬ್ಧಾರಿ ನಿರ್ವಾಹಕರಾಗಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ಮೂರು ಅವಧಿಯ ಟ್ರಸ್ಟಿಯಾಗಿ, ಸುದ್ದಿ ಬಿಡುಗಡೆ ಪತ್ರಿಕೆಯ ತಾಲೂಕು ಪ್ರತಿನಿಧಿಯಾಗಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಜೊತೆ ಕಾರ್ಯದರ್ಶಿ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡವರಾಗಿದ್ದಾರೆ. ಇವರ ಅಧಿಕೃತ ಪದಗ್ರಣ ಕಾರ್ಯಕ್ರಮ ಮುಂದಿನ ಗಾಂಧಿಜಯಂತಿ ಕಾರ್ಯಕ್ರಮದ ಜೊತೆಗೆ ನಡೆಯಲಿದೆ.





