ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ‘ರೇಡಿಯೋ ನಿನಾದ 90.4 FM’ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ಸಿದ್ಧತೆಗಾಗಿ ‘ಪರೀಕ್ಷಾ ಸಂಭ್ರಮ’ ವಿಶೇಷ ಶೈಕ್ಷಣಿಕ ಕಾರ್ಯಕ್ರಮ ಸರಣಿ ಫೆ.5ರಿಂದ ಆರಂಭವಾಗಲಿದೆ.
ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು, ಫೆ.21ರ ವರೆಗೆ ಪ್ರಸಾರವಾಗಲಿದೆ. ಪರೀಕ್ಷಾ ಭಯವನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಹಾಗೂ ವಿಷಯವಾರು ತಜ್ಞರಿಂದ ಮಹತ್ವದ ಮಾಹಿತಿ ನೀಡುವ ಉದ್ದೇಶವನ್ನು ಈ ಸರಣಿ ಹೊಂದಿದೆ.
ಪ್ರತಿದಿನ ಬೆಳಗ್ಗೆ 7.30ಕ್ಕೆ, ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದ್ದು, ಸಂಜೆ 7.30ಕ್ಕೆ ಮರುಪ್ರಸಾರಗೊಳ್ಳಲಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರೇಡಿಯೋ ನಿನಾದ 90.4 FM ತರಂಗಾಂತರದ ಜೊತೆಗೆ, ‘ರೇಡಿಯೋ ನಿನಾದ’ ಮೊಬೈಲ್ ಆ್ಯಪ್, ರೇಡಿಯೋ ಗಾರ್ಡನ್ ಹಾಗೂ ರೇಡಿಯೋ ನಿನಾದದ ಅಧಿಕೃತ ಯೂಟ್ಯೂಬ್ (YouTube) ಚಾನೆಲ್ ಮೂಲಕವೂ ಕಾರ್ಯಕ್ರಮವನ್ನು ಆಲಿಸಬಹುದಾಗಿದೆ ಎಂದು ರೇಡಿಯೋ ನಿನಾದ ಕಾರ್ಯಕ್ರಮ ಸಂಯೋಜಕ ವಿಕೆ ಕಡಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9686392283 ಮೂಲಕ ಕಾರ್ಯಕ್ರಮ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ.





